ದಾವಣಗೆರೆ:ನ್ಯಾಯಬೆಲೆ ಅಂಗಡಿಯ ಅಕ್ರಮದ ವಿರುದ್ಧ ಧ್ವನಿ ಎತ್ತಿ ನ್ಯಾಯ ಸಿಗದ ಹಿನ್ನೆಲೆ ನೇಣಿಗೆ ಶರಣಾಗಿರುವ ವೀರಾಚಾರಿ ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಸಾಲುಮರದ ವೀರಾಚಾರಿ ಎಂದೇ ಖ್ಯಾತಿ ಗಳಿಸಿದ್ದರು. ಈ ಪರಿಸರ ಪ್ರೇಮಿ ಬಡ ಜನರ ಧ್ವನಿಯಾಗಿದ್ದರು.
ಮಿಟ್ಲಕಟ್ಟೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ಅಪಾರ ಪ್ರಮಾಣದ ಅಕ್ರಮ ಎಸಗಿದರ ಬಗ್ಗೆ ವೀರಾಚಾರಿಯವರು ಧ್ವನಿ ಎತ್ತಿದ್ದರು. ಸತತ ಇಪ್ಪತು ವರ್ಷಗಳಿಂದ ಸಿದ್ದರಾಮಪ್ಪ ವಿರುದ್ಧ ಹೋರಾಟ ಮಾಡ್ತಿದ್ದ ವೀರಾಚಾರಿ ಅವರಿಗೆ ಆಡಳಿತ ಯಂತ್ರದಿಂದ ನ್ಯಾಯ ಸಿಗದ ಬೆನ್ನಲ್ಲೇ ಹೇಳಿದಂತೆ ನೇಣಿಗೆ ಶರಣಾಗಿದ್ದಾರೆ.
ವರ್ಷಕ್ಕೆ 700 ಕ್ವಿಂಟಾಲ್ ಅಕ್ರಮ ಎಸಗುತ್ತಿದ್ದ ಸಿದ್ದರಾಮಪ್ಪ:ಸದಾ ಹೋರಾಟದಲ್ಲಿ ನಿರತರಾಗಿ ಬಡವರ ಧ್ವನಿಯಾಗಿ ಕೆಲಸ ಮಾಡ್ತಿದ್ದ ಪರಿಸರಪ್ರೇಮಿ ವೀರಾಚಾರಿ ಅವರು ಇಪ್ಪತ್ತು ವರ್ಷಗಳಿಂದ ಮಿಟ್ಲಕಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದರು. ಮಿಟ್ಲಗಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ, ಗೋಧಿ, ರಾಗಿ ವಿತರಣೆ ಮಾಡದ ಮಾಲೀಕ ಸಿದ್ದರಾಮಪ್ಪನ ವಿರುದ್ಧ ಹೋರಾಟ ಅಸ್ತ್ರ ಝಳಪಿಸಿದ್ದರು.
ಜನರಿಗೆ ಪಡಿತರ ಕೊಡಲು ತಾರತಮ್ಯ ಮಾಡುತ್ತಿದ್ದ ಸಿದ್ದರಾಮಪ್ಪನ ಪಡಿತರ ಅಂಗಡಿ ರದ್ದು ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ದಿನ ಚರ್ಚೆ ನಡೆದಿತ್ತು. ನ್ಯಾಯಬೆಲೆ ಅಂಗಡಿ ಮುಚ್ಚಬಾರದು ಎಂದು ಕೋರ್ಟ್ ತಾತ್ಕಾಲಿಕ ಸ್ಟೇ ನೀಡಿತ್ತು. ಅದರಿಂದ ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರು ಕಳೆದ ದಿನ ಸಭೆ ಕರೆದು ಅಂಗಡಿ ರದ್ದು ಪಡಿಸದಂತೆ ಕೋರ್ಟ್ ಸ್ಟೇ ನೀಡಿದೆ ಕಾದು ನೋಡೋಣ ಎಂದು ವೀರಾಚಾರಿಯವರಿಗೆ ಮನವರಿಕೆ ಮಾಡಿ ಕಳಿಸಿದ್ದರು.
ನ್ಯಾಯ ಸಿಗದ ಕಾರಣ ವಾಗ್ದಾನ ಮಾಡಿದಂತೆ ನೇಣಿಗೆ ಶರಣು:ಕಳೆದ ದಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಡಿತರ ಅಂಗಡಿ ಮುಚ್ಚಬೇಕೆ ಇಲ್ಲ ಬೇಡವೆ ಎಂದು ಜನರ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಮಿಟ್ಲಕಟ್ಟೆ ಗ್ರಾಮದ ಜನ ನ್ಯಾಯಬೆಲೆ ಅಂಗಡಿ ಅಕ್ರಮ ಹೆಚ್ಚಾಗಿದೆ ಅದ್ದರಿಂದ ಅಂಗಡಿಯನ್ನು ರದ್ದುಪಡಿಸಬೇಕು ಎಂದು ಧ್ವನಿಗೂಡಿಸಿದ್ದರು. ಇನ್ನು ಹೋರಾಟಕ್ಕೂ ಮುನ್ನ ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ ಜನರಲ್ಲಿ ನ್ಯಾಯ ಸಿಗದಿದ್ದರೆ ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣು ಎಂಬ ವಾಗ್ದಾನ ಮಾಡಿದ್ದರು. ವಾಗ್ದಾನದಂತೆ ನಿನ್ನೆ ರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಿದ್ದಾರೆ.