ದಾವಣಗೆರೆ: ನಮ್ಮೂರೇ ನಮಗೆ ಸವಿಬೆಲ್ಲ ಎಂಬ ಮಾತು ಅಕ್ಷರಶಃ ನಿಜ. ಎಷ್ಟೇ ಡಿಗ್ರಿ ತೆಗೆದುಕೊಂಡರೂ, ಎಂತಹ ಕೆಲಸದಲ್ಲೇ ಇದ್ದರೂ, ಯಾವುದೇ ಊರಿನಲ್ಲಿದ್ದರೂ ನಮ್ಮೂರಿನ ಮೇಲೆ ಇರುವ ಅಭಿಮಾನ ಮಾತ್ರ ಕಡಿಮೆಯಾಗೊಲ್ಲ. ನಮ್ಮೂರಿನ ವಿಶೇಷತೆಗಳ ಬಗ್ಗೆ ಎಲ್ಲರಿಗೂ ತಿಳಿಸಬೇಕೆಂಬ ಹಂಬಲವಿರುತ್ತೆ. ಹೀಗೆ ದಾವಣಗೆರೆಯ ಕೆಲ ವಿದ್ಯಾರ್ಥಿಗಳು ಸೇರಿ ತಮ್ಮೂರಿನ ವಿಶೇಷತೆಯ ಬಗ್ಗೆ ಬಹಳ ವಿಶೇಷ ರೀತಿಯಲ್ಲಿ ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ದಾವಣಗೆರೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು, 'ಬೆಣ್ಣೆ ದೋಸೆ ಊರು ನಮ್ದು, ನೀವು ಬಂದು ಒಮ್ಮೆ ನೋಡಿ. ಎಲ್ಲೆಲ್ಲಿಂದಲೋ ಬಂದು ಓದುವವರು ಇಲ್ಲಿ ಜಾಸ್ತಿ. ಖಾರಮಂಡಕ್ಕಿನೂ ಕ್ರೇಜು ನಮ್ಮೂರಲಿ ಇಟ್ಸ್ ದಾವಣಗೆರೆ ಇಟ್ಸ್ ದಾವಣಗೆರೆ' ಎಂದು ಗಿಟಾರ್ ಹಿಡಿದು ಹಾಡಿದ್ದಾರೆ.
ಇವರಿಗೆ ನಮ್ಮೂರಿನ ಬಗ್ಗೆ, ನಮ್ಮೂರಿನ ವಿಶೇಷತೆಯ ಬಗ್ಗೆ ಜಗತ್ತಿಗೆ ವಿಶಿಷ್ಟ ರೀತಿಯಲ್ಲಿ ತಿಳಿಸಿಕೊಡಬೇಕೆಂಬ ಹಂಬಲವಿದ್ದು, ಇದಕ್ಕಾಗಿ ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು "ಇಟ್ಸ್ ದಾವಣಗೆರೆ" ಅನ್ನೋ ಆಲ್ಬಂ ಸಾಂಗ್ ಒಂದನ್ನ ಚಿತ್ರೀಕರಿಸಿದ್ದಾರೆ. ದಾವಣಗೆರೆ ನಗರದ ಹಾಗೂ ಜಿಲ್ಲೆಯ ಹಲವು ವಿಶೇಷತೆಗಳನ್ನು ಈ ಆಲ್ಬಂ ಸಾಂಗ್ನಲ್ಲಿ ತೋರಿಸಲಾಗಿದೆ. ಇದಕ್ಕೆ ಸಾಹಿತ್ಯ, ಸಂಗೀತ, ನಿರ್ದೇಶನ ಹಾಗೂ ಸಂಕಲನ ಕೆಲಸಗಳನ್ನು ಇದೇ ವಿದ್ಯಾರ್ಥಿಗಳ ತಂಡ ಮಾಡಿದೆ. ಹಾಲೇಶ್, ಸುಶ್ಮಿತಾ, ಸನತ್, ಕಾರ್ತಿಕ್ ಸೇರಿದಂತೆ ಯುವಕರ ತಂಡ ಅದ್ಭುತವಾಗಿ ಆಲ್ಬಂ ತಯಾರಿಸಿದ್ದು, ಆಲ್ಬಂಬ್ ಬಿಡುಗಡೆ ಮಾಡಿದೆ.