ಸಿಂಗಲ್ ಫೇಸ್ ಕರೆಂಟ್ ಕಣ್ಣಾಮುಚ್ಚಾಲೆಗೆ ಒಣಗುತ್ತಿದೆ ಬೆಳೆ: ಮಂಡಲೂರಿನ ರೈತರ ಬವಣೆ ದಾವಣಗೆರೆ: ರೈತರು ಒಣ ಭೂಮಿಯಲ್ಲಿ ಬೆಳೆಯುವ ಬೆಳೆಗಳಿಗೆ ಭರಪೂರ ನೀರು ಹಾಯಿಸಲು ಮೋಟರ್ ಜೊತೆಗೆ ವಿದ್ಯುತ್ ಕೂಡ ಅತ್ಯವಶ್ಯಕ. ಆದರೆ ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದಲ್ಲಿ ವಿದ್ಯುತ್ ವೋಲ್ಟೇಜ್ ಕಡಿಮೆ ಆಗುತ್ತಿದ್ದು, ಸಿಂಗಲ್ ಪೇಸ್ನಿಂದಾಗಿ ನೂರಾರು ಮೋಟರ್ಗಳು ಹಾಗೂ ವಿದ್ಯುತ್ ಟೀಸಿಗಳು ಸುಟ್ಟು ಕರಕಲಾಗಿವೆ. ನೀರು ಹಾಯಿಸಲಾಗದೆ ಬೆಳೆಗಳು ಒಣಗುತ್ತಿದ್ದು ರೈತರು ಕಂಗಾಲಾಗಿದ್ದಾರೆ.
ಮಂಡಲೂರು ಬಡಪೀಡಿತ ಗ್ರಾಮ. ರೈತರು ಕೊಳವೆ ಬಾವಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದು ಈ ಭಾಗದ ನೂರಾರು ಬೋರ್ವೆಲ್ಗಳಲ್ಲಿ ಒಳ್ಳೆಯ ನೀರು ದೊರೆಯುತ್ತಿದೆ.
ಮಂಡಲೂರು ಗ್ರಾಮ ಆನಗೋಡು ವಿದ್ಯುತ್ ಸರಬರಾಜು ಕೇಂದ್ರದ ಕಟ್ಟಕಡೆಯ ಹಳ್ಳಿಯಾಗಿದೆ. ಇಲ್ಲಿನ ಕೆಲವು ಅಧಿಕಾರಿಗಳು ನೀರ್ಥಡಿ ಹಾಗೂ ಮಂಡಲೂರು ಗ್ರಾಮಕ್ಕೆ ಐದು ತಾಸು ವಿದ್ಯುತ್ ಕೊಡುವುದಾಗಿ ಹೇಳಿ ನೂತನ ಲೈನ್ ಹಾಕಲು ಮುಂದಾಗಿದ್ದರು. ಇದೀಗ ಕಾಮಗಾರಿ ನಡೆಯುತ್ತಿದೆ. ತಿಂಗಳುಗಳೇ ಕಳೆದರೂ ಮಂಡಲೂರಿಗೆ 250ಕ್ಕೂ ಹೆಚ್ಚು ವೋಲ್ಟೇಜ್ ನೀಡುವ ಬದಲು ಕೇವಲ 150 ವೋಲ್ಟೇಜ್ ವಿದ್ಯುತ್ ನೀಡುತ್ತಿದ್ದಾರೆ.
ರೈತ ತಿಮ್ಮನ ಗೌಡ ಮಾತನಾಡಿ, "ಬೆಸ್ಕಾಂ ಅಧಿಕಾರಿಗಳು ಹೊಸ ಲೈನ್ ಮಾಡುವ ಮೂಲಕ ಹೆಬ್ಬಾಳು ಹಾಗೂ ಆನಗೋಡು ಮಧ್ಯೆ ಬರುವ 40 ಟೀಸಿಗಳಿಗೆ ಲೈನ್ ಎಳೆದುಕೊಟ್ಟ ಬೆನ್ನಲ್ಲೇ ನಮ್ಮ ಗ್ರಾಮಕ್ಕೆ ವೋಲ್ಟೇಜ್ ಡ್ರಾಪ್ ಆಗ್ತಿದೆ. ನಮ್ಮ ಗ್ರಾಮದಲ್ಲಿ ಸರಿಯಾದ ವಿದ್ಯುತ್ ಸಿಗ್ತಿಲ್ಲ, ಲೋ ವೋಲ್ಟೇಜ್ ಇರುವುದರಿಂದ ಗ್ರಾಮದಲ್ಲಿ 300 ರಿಂದ 400 ಮೋಟರ್ಗಳು ಸುಟ್ಟಿವೆ. ದಿನದಲ್ಲಿ 5 ತಾಸು ವಿದ್ಯುತ್ ಕೊಡಬೇಕು. ಆದರೆ ವಿದ್ಯುತ್ ಮಾತ್ರ ಮರೀಚಿಕೆ. ಜಮೀನುಗಳಿಗೆ ನೀರು ಹಾಯಿಸಲಾಗದೆ ಬೆಳೆಗಳು ಒಣಗುತ್ತಿವೆ. ಬೆಸ್ಕಾಂ ಅಧಿಕಾರಿಗಳು ಸರಿಪಡಿಸದಿದ್ದರೆ ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣ ಆಗಲಿದೆ" ಎಂದರು.
ಬೆಸ್ಕಾಂ ಎಇಇ ಪ್ರತಿಕ್ರಿಯೆ:ಬೆಸ್ಕಾಂನ ಎಇಇ ತೀರ್ಥೇಶ್ ದೂರವಾಣಿಯಲ್ಲಿ ಮಾತನಾಡಿ, "ಮಂಡಲೂರು ಗ್ರಾಮದಲ್ಲಿ ವಿದ್ಯುತ್ ಹೆವಿ ಲೋಡ್ ಆಗಿದ್ದು, ನೂರಾರು ಮೋಟರ್ಗಳನ್ನು ಬಳಕೆ ಮಾಡುವುದರಿಂದ ಸಮಸ್ಯೆಯಾಗಿದೆ. ಆ ಗ್ರಾಮದಲ್ಲಿ ಮೊದಲಿಗೆ 40 ವಿದ್ಯುತ್ ಲೋಡ್ ಇದ್ದದ್ದು ಇದೀಗ 80 ಲೋಡ್ ಆಗಿದೆ. ಹೊಸ ಲೈನ್ ಎಳೆಯುವ ಮೂಲಕ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ" ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಮುಳ್ಳಿನ ಗದ್ದಿಗೆ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ.. ಆತಂಕ ಸೃಷ್ಟಿಸಿದೆ ಕಾರ್ಣಿಕ ಭವಿಷ್ಯ