ದಾವಣಗೆರೆ:ರಾಜ್ಯದಲ್ಲಿ ದಿನೇ ದಿನೇ ಚುನಾವಣೆ ರಂಗೇರುತ್ತಿದ್ದು, ದಾವಣಗೆರೆಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ಆರಂಭವಾಗಿದೆ, ಇನ್ನು ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವ ಮೊದಲೇ ದಾವಣಗೆರೆಯ ಕಾಂಗ್ರೆಸ್ ನಾಯಕರಾದ ಎಸ್.ಎಸ್ ಮಲ್ಲಿಕಾರ್ಜುನ್ ಮತ್ತು ಶಾಮನೂರು ಶಿವಶಂಕರಪ್ಪ ಇಂದಿನಿಂದ ಜಿಲ್ಲೆಯಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.
ಚುನಾವಣಾ ಪ್ರಚಾರಕ್ಕೂ ಮೊದಲು ಸಂಪ್ರದಾಯದಂತೆ ಶಾಮನೂರಿನ ಆಂಜನೇಯ ಸ್ವಾಮಿ ಹಾಗೂ ಆನಕೊಂಡದ ಬಸವೇಶ್ವರ ಮತ್ತು ಈಶ್ವರ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣ ಅಖಾಡಕ್ಕೆ ತಂದೆ-ಮಗ ಇಬ್ಬರು ಇಳಿದರು.
2018ರ ಚುನಾವಣೆಯಲ್ಲಿ ಸೋತು ಕ್ಷೇತ್ರದಿಂದಲೇ ದೂರವಾಗಿದ್ದ ಮಾಜಿ ಸಚಿವ:ಇನ್ನು 2018ರಲ್ಲಿ ಸೋತು ತಮ್ಮ ಕ್ಷೇತ್ರದಿಂದ ದೂರ ಉಳಿದಿದ್ದ ಎಸ್ಎಸ್ ಮಲ್ಲಿಕಾರ್ಜುನ್ ಅವರು ಟಿಕೆಟ್ ಘೋಷಣೆ ಆಗುತ್ತಿದ್ದಂತೆ ತಮ್ಮ ಕಾರ್ಯಕರ್ತರೊಂದಿಗೆ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ಆಶೀರ್ವಾದ ಮತ್ತು ಬೆಂಬಲ ನನ್ನ ಮೇಲೆ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಕ್ಕೆ ಬೊಮ್ಮಾಯಿ ಅಲ್ಲ ಮೋದಿ ಬರಲಿ:ತನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅಲ್ಲ ಪ್ರಧಾನಿ ಮೋದಿ ಬಂದರೂ ಜನ ನಮ್ಮೊಂದಿಗಿದ್ದಾರೆ, ಇಂದಿನಿಂದ ಪ್ರಚಾರ ಆರಂಭ ಮಾಡಿದ್ದೇವೆ, ನಮ್ಮ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದ್ದು, ಕಾರ್ಯಕರ್ತರೊಂದಿಗೆ ಪ್ರಚಾರ ಆರಂಭಿಸಿದ್ದೇವೆ. ಬಿಜೆಪಿ ಸರ್ಕಾರದ್ದು 40 ಪರ್ಸೆಂಟ್ ಕಮಿಷನ್ ಸರ್ಕಾರ, ಇದರಿಂದ ಜನ ಬೇಸತ್ತಿದ್ದಾರೆ, ನಾವು ಮಾಡಿದ ಕೆಲಸಗಳಿಗೆ ಅವರು ಅಡಿಗಲ್ಲುಗಳನ್ನು ಹಾಕಿಸಿಕೊಂಡಿದ್ದಾರೆ. ದಾವಣಗೆರೆಯಲ್ಲೂ 40 ಪರ್ಸೆಂಟ್ ಕಮಿಷನ್ ದಂಧೆ ನಡೆಯುತ್ತಿದೆ, ಕೋವಿಡ್ ವೇಳೆಯಲ್ಲಿ ವ್ಯಾಕ್ಸಿನ್ ಸಿಗದೇ ಜನ ಮೃತಪಟ್ಟರು, ಮೋದಿ ಮಹಾಸಂಗಮ ಸಮಾವೇಶದ ಮುಂದೆ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ದೊಡ್ಡ ಸಮಾವೇಶದಂತೆ ನಡೆಯಲಿಲ್ಲ ಎಂದರು.
ಎಸ್ ಎಸ್ ಮಲ್ಲಿಕಾರ್ಜುನ್ ಹಿಟ್ಲರ್ಗೆ ಹೋಲಿಸಿದ್ದು ಯಾರಿಗೆ?:ರಾಜ್ಯ - ಕೇಂದ್ರದಲ್ಲಿ ಇವರ ಹಣೆಬರಹ ಒಂದೇ ಆಗಿದೆ, ಹಿಟ್ಲರ್ ರೀತಿ ವರ್ತನೆ ಮಾಡುತ್ತಿದ್ದಾರೆ, ಅರ್ಧ ಮುಖ ಹಿಟ್ಲರ್ ರೀತಿ ಇದೆ, ಹಿಟ್ಲರ್ ರೀತಿ ಹೆದರಿಸಿ ಪ್ರಪಂಚವನ್ನು ಗೆಲ್ಲಲು ಬಿಜೆಪಿಯವರು ಹೊರಟ್ಟಿದ್ದಾರೆ, ಅರ್ಧ ಮುಖ ಹಿಟ್ಲರ್ ಅವರದ್ದು, ಇನ್ನರ್ಧ ಮುಖ ಇನ್ನೊಬ್ಬರದ್ದು, ಅದು ಯಾರದ್ದು ಎಂದು ನೀವೇ ತಿಳಿದುಕೊಳ್ಳಿ, ಹಿಟ್ಲರ್ ಅವರದ್ದು ಅರ್ಧ ಮೀಸೆ, ಇನ್ನರ್ಧ ಗಡ್ಡ, ಮೀಸೆ ಎಂದು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೆಸರು ಹೇಳದೇ ಎಸ್ ಎಸ್ ಮಲ್ಲಿಕಾರ್ಜುನ್ ಹರಿಹಾಯ್ದರು.
ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಿದ ಶಿವಶಂಕರಪ್ಪ: ಇನ್ನೂ ದಾವಣಗೆರೆ ಉತ್ತರದಲ್ಲಿ ಮಗ ಮಲ್ಲಿಕಾರ್ಜುನ್ ಮತಬೇಟೆ ಮಾಡಿದ್ರೇ, ಇತ್ತ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 92 ವರ್ಷ ವಯಸ್ಸಿನ ಶಾಮನೂರು ಶಿವಶಂಕರಪ್ಪ ಅವರು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದರು, ಎಲೆಕ್ಟ್ರಿಕ್ ಗಾಡಿಯಲ್ಲಿ ಕುಳಿತು ಕ್ಷೇತ್ರದಲ್ಲಿ ಸಂಚರಿಸಿದ್ದು ಜನರು ಹುಬ್ಬೇರುವಂತಿತ್ತು. ಇನ್ನು ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಇದ್ದರು ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಕೆಲ ಮುಸ್ಲಿಂ ಮುಖಂಡರು ಶಾಮನೂರು ಶಿವಶಂಕರಪ್ಪ ಅವರಿಂದ ಅಂತರ ಕಾಪಾಡಿಕೊಂಡಿದ್ದರು.
ಇದನ್ನೂ ಓದಿ:ಸಿದ್ದರಾಮಯ್ಯ ಎರಡು ಕಡೆ ಸ್ಫರ್ಧೆ: ಕೇಂದ್ರ ಚುನಾವಣಾ ಕಮಿಟಿ ಸಭೆಯಲ್ಲಿ ನಾಳೆ ನಿರ್ಧಾರ : ಜಿ ಪರಮೇಶ್ವರ್