ಕರ್ನಾಟಕ

karnataka

ETV Bharat / state

ಸೀಲ್‍ ಡೌನ್ ಪ್ರದೇಶದ ಜನರ ಸ್ಥಿತಿಗತಿ ಪರಿಶೀಲಿಸಲು ಡ್ರೋನ್ ಕ್ಯಾಮರಾ ಬಳಕೆ: ದಾವಣಗೆರೆ ಡಿಸಿ

ಹೆಚ್ಚಾಗಿ ಕೊರೊನಾ ಹರಡುತ್ತಿರುವ ಜಾಲಿನಗರದ ಜನರ ಮೇಲೆ ಕಣ್ಣಿಡಲು ಡ್ರೋನ್​​ ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೀಲ್‍ಡೌನ್ ಪ್ರದೇಶದ ಜನರ ಸ್ಥಿತಿಗತಿ ಪರಿಶೀಲಿಸಲು ಡ್ರೋನ್ ಬಳಕೆ
ಸೀಲ್‍ಡೌನ್ ಪ್ರದೇಶದ ಜನರ ಸ್ಥಿತಿಗತಿ ಪರಿಶೀಲಿಸಲು ಡ್ರೋನ್ ಬಳಕೆ

By

Published : May 6, 2020, 9:34 PM IST

ದಾವಣಗೆರೆ:ಕೊರೊನಾ ವೈರಸ್ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 5 ಕಂಟೈನ್ಮೆಂಟ್​ ಝೋನ್‍ಗಳನ್ನು ಈಗಾಗಲೇ ಸೀಲ್‍ ಡೌನ್ ಮಾಡಲಾಗಿದೆ. ಅಲ್ಲಿನ ಜನರ ಸ್ಥಿತಿಗತಿ ಪರಿಶೀಲಿಸಲು ಜಿಲ್ಲಾಡಳಿತದಿಂದ ಡ್ರೋನ್​ಗಳ ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡದೊಂದಿಗೆ ಸೀಲ್‍ ಡೌನ್ ಪ್ರದೇಶವಾದ ಜಾಲಿನಗರದಲ್ಲಿ ಡ್ರೋನ್​​ ಪರಿವೀಕ್ಷಣೆ ಮತ್ತು ಸರ್ವೇಕ್ಷಣಾ ತಂಡದ ತಪಾಸಣೆ ಕಾರ್ಯ ಪರಿಶೀಲಿಸಲು ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಹಾಗೂ ಅವರಿಗೆ ಎಚ್ಚರಿಸಲು ಡ್ರೋನ್​ ಬಳಕೆ ಮಾಡಲಾಗುತ್ತಿದೆ ಎಂದರು.

ಅತ್ಯಂತ ಹೆಚ್ಚಿನ ರೆಸಲ್ಯೂಷನ್ ಇರುವಂತಹ ಈ ಡ್ರೋನ್ ಕ್ಯಾಮರಾದ ಸಹಾಯದಿಂದ ಇಲ್ಲಿಯೇ ನಿಂತು ಎಲ್ಲೆಡೆ ಏನೇನು ನಡೆಯುತ್ತಿದೆ ಎಂದು ತಿಳಿಯಬಹುದಾಗಿದೆ. ಎಲ್ಲಾ ರೀತಿಯ ಉನ್ನತ ಮಟ್ಟದ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ಬಳಸಿಕೊಳ್ಳುವ ಮೂಲಕ ಹಾಗೂ ಜಿಲ್ಲೆಯಲ್ಲಿ ಇರುವಂತಹ ವೈದ್ಯಕೀಯ ಸೌಲಭ್ಯದೊಂದಿಗೆ ನಾವು ವ್ಯವಸ್ಥಿತವಾಗಿ ಕೊರೊನಾ ನಿಯಂತ್ರಣ ಮಾಡುತ್ತೇವೆ ಎನ್ನುವ ವಿಶ್ವಾಸ ನಮ್ಮಲ್ಲಿದೆ. ಮುಂಬರುವ ದಿನಗಳಲ್ಲಿ ಈ ಕುರಿತು ಏನು ಫಲಿಂತಾಂಶ ಬರುತ್ತದೆ ಎನ್ನುವುದನ್ನು ತಿಳಿಸುತ್ತೇವೆ ಎಂದು ಹೇಳಿದರು.

ಸೀಲ್‍ ಡೌನ್ ಪ್ರದೇಶದ ಜನರ ಸ್ಥಿತಿಗತಿ ಪರಿಶೀಲಿಸಲು ಡ್ರೋನ್ ಬಳಕೆ

ಕಂಟೈನ್‍ಮೆಂಟ್ ಝೋನ್‍ನಲ್ಲಿ ಎಲ್ಲರ ತಪಾಸಣೆ:

ನಿನ್ನೆ 12 ಪಾಸಿಟಿವ್ ಕೇಸ್ ಬಂದಿವೆ. ಅದರಲ್ಲಿ ಹೆಚ್ಚಿನವು ಜಾಲಿನಗರಕ್ಕೆ ಸಂಬಂಧಪಟ್ಟಿವೆ. ಇನ್ನೊಂದು ಪ್ರಕರಣ ಕೆಟಿಜೆ ನಗರಕ್ಕೆ ಸಂಬಂಧಿಸಿದ್ದಾಗಿದೆ. ಅಲ್ಲಿ ಹೊಸ ಕಂಟೈನ್ಮೆಂಟ್​ ಝೋನ್ ಮಾಡಲಾಗಿದೆ. ಈ ಜಾಲಿನಗರದ ಎಲ್ಲಾ ಪ್ರಕರಣಗಳು ಪಿ-556ಕ್ಕೆ ಸಂಬಂಧಿಸಿದೆ. ಈ ಹಿನ್ನೆಲೆಯಲ್ಲಿ ತಪಾಸಣೆಯಲ್ಲಿ ಆಶಾ ಕಾರ್ಯಕರ್ತೆಯರ ಜೊತೆ ಆರೋಗ್ಯಾಧಿಕಾರಿಗಳನ್ನು ನೇಮಿಸಲಾಗಿದೆ. ಇವರು ಪಿಪಿಇ ಕಿಟ್ ಧರಿಸಿ ಎಲ್ಲಾ ಮನೆಗಳ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ಮಾಡುತ್ತಾರೆ. ಆರೋಗ್ಯಾಧಿಕಾರಿಗೆ ಅವರ ಆರೋಗ್ಯದ ಕುರಿತು ಖಚಿತ ಮಾಹಿತಿ ತಿಳಿಯುತ್ತದೆ. ಈ ಸಮಯದಲ್ಲಿ ಕೂಡಲೇ ಅಂತಹವರನ್ನು ಕರೆದುಕೊಂಡು ಬರಲು ಹಾಗೂ ಸಾಗಿಸಲು ಆಂಬ್ಯುಲೆನ್ಸ್, ಬಸ್ ಜೊತೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಒಮ್ಮೆ ಎಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಜಿಲ್ಲಾಡಳಿತ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಾಲಿನಗರದ ಸಂಪೂರ್ಣ ಸ್ವಚ್ಛ ಕಾರ್ಯ:

ಅತಿ ಹೆಚ್ಚು ಪ್ರಕರಣಗಳಿರುವ ಜಾಲಿನಗರವನ್ನು ಸಂಪೂರ್ಣ ಸ್ವಚ್ಛ ಮಾಡಬೇಕಾಗಿದೆ. ಇಲ್ಲಿ ಇರುವಂತಹ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕೆಂಬ ಉದ್ದೇಶದಿಂದ ಎಸ್‍ಪಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಿಹೆಚ್‍ಒ, ಎಡಿಸಿ ಎಲ್ಲರೂ ಸೇರಿ ಒಂದು ಯೋಜನೆ ತಯಾರಿಸಿದ್ದು, ಅದರಂತೆ ಇಂದು ಕಾರ್ಯಗತಗೊಳಿಸಲಾಗಿದೆ ಎಂದರು.

ಆರೋಗ್ಯ ತಪಾಸಣೆಗಾಗಿ 20 ತಂಡ ಮಾಡಲಾಗಿದೆ. ಆ ಪ್ರತಿ ತಂಡಕ್ಕೆ ವಿಶೇಷ ಆರೋಗ್ಯಾಧಿಕಾರಿಯನ್ನು ನೇಮಿಸಲಾಗಿದೆ. ಇವರು ಪ್ರತಿ ಮನೆಗೆ ಹೋಗುತ್ತಾರೆ. ಎಲ್ಲಾ ರಸ್ತೆಯ ಪ್ರತಿ ಮನೆ ಒಳಗೊಂಡು, ಈ ಪ್ರದೇಶದೊಳಗೆ ಇರುವಂತಹ ಸುಮಾರು 2000 ಮನೆಗಳ ಸದಸ್ಯರನ್ನು ತಪಾಸಣೆ ನಡೆಸಲಾಗುವುದು. ಇವತ್ತು ಎಷ್ಟು ಸಾಧ್ಯವೋ ಅಷ್ಟು ಮಾಡಿ ಉಳಿದಿದ್ದು ನಾಳೆಗೆ ಮುಗಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

ಆದಷ್ಟು ಬೇಗ ಸೋಂಕಿನ ಮೂಲ ಪತ್ತೆ:

ಸೋಂಕಿನ ಮೂಲದ ಕುರಿತು ಮುಖ್ಯವಾಗಿ ಹಾಸನ, ಚಿತ್ರದುರ್ಗ, ಬಳ್ಳಾರಿ ಹಾಗೂ ಬಾಗಲಕೋಟೆಗೆ ಗೂಡ್ಸ್ ವಾಹನದಲ್ಲಿ ಹೋಗಿ ಬಂದಂತಹವರ ಮಾಹಿತಿ ಸಿಕ್ಕಿದೆ. ಈರುಳ್ಳಿ ತುಂಬಿದ ಲಾರಿಗಳಲ್ಲಿ ಹೋಗಿ ಬಂದವರಿಗೆ ಲಕ್ಷಣ ಕಂಡು ಬಂದಿದೆ. ಅದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಇನ್ನು ಸ್ಪಲ್ಪ ಸಮಯ ಬೇಕಾಗಿದೆ. ವೈದ್ಯಾಧಿಕಾರಿಗಳ ಸಹಾಯದಿಂದ ವಿಚಾರಣೆ ಮಾಡಿ ಕೂಡಲೇ ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದರು.

ABOUT THE AUTHOR

...view details