ಹರಿಹರ:ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಕುಮಾರಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಗುರುವಾರ ಚಿತ್ರ ಕಲಾವಿದ ಡಾ.ಜಿ.ಜೆ ಮೆಹೆಂದಳೆ ರಚಿಸಿದ ಚಿತ್ರವನ್ನು ಉಪ ಅಂಚೆ ಪಾಲಕ ಕೆ. ಲೋಕೇಶ್ ನಾಯ್ಕ್ ಬಿಡುಗಡೆ ಮಾಡಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕೇಶ್ ನಾಯ್ಕ್, ಪ್ರತಿ ವರ್ಷ ಪರಿಸರ ದಿನಾಚರಣೆ ಸಂದರ್ಭದಲ್ಲಿ ಐದು ದಿನಗಳ ಕಾಲ ವಿಶ್ವದಾದ್ಯಂತ ಲಾಕ್‌ಡೌನ್ ಆಚರಿಸಬೇಕು. ಹಾಗೂ ಆ ವೇಳೆ ಸಸಿ ನೆಡುವುದು, ನದಿ, ಕೆರೆ, ಹಳ್ಳ, ಕೊಳ್ಳಗಳ ಸ್ವಚ್ಛತೆಯ ಸಾಮೂಹಿಕ ಶ್ರಮದಾನ ನಡೆಸಬೇಕು ಇದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ ಎಂದು ತಿಳಿಸಿ, ನಿವೃತ್ತ ಚಿತ್ರಕಲಾವಿದ ಮೆಹೆಂದಳೆಯವರ ಪರಿಸರ ಕಾಳಜಿ ಬಗ್ಗೆ ಶ್ಲಾಘಿಸಿದರು.
ಇದೇ ವೇಳೆ ಡಾ.ಜಿ.ಜೆ.ಮೆಹೆಂದಳೆ ಮಾತನಾಡಿ, ಭೂಮಿ ತಾಪಮಾನ ಹೆಚ್ಚಾಗುತ್ತಿದ್ದು ಹಿಮಾಲಯ ಹಾಗೂ ಧೃವ ಪ್ರದೇಶದಲ್ಲಿ ಹಿಮ ಗಡ್ಡೆಗಳು ಕರಗುತ್ತಿವೆ. ಸಮುದ್ರ ಮಟ್ಟ ಏರುತ್ತಾ ಭೂ ಪ್ರದೇಶ ಕ್ಷೀಣಿಸುತ್ತಿದೆ. ಈಗಲೂ ನಾವು ಎಚ್ಚೆತ್ತು ಪರಿಸರ ಕಾಳಜಿ ಹೊಂದದಿದ್ದರೆ ಮಾನವ ಕುಲ ದೊಡ್ಡ ಆಘಾತ ಎದುರಿಸಬೇಕಾಗುತ್ತದೆ ಎಂದರು.