ದಾವಣಗೆರೆ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಯಾರೂ ವಿರೋಧ ಮಾಡಬಾರದು. ಕಳೆದ 10 ವರ್ಷಗಳಿಂದ ಹೋರಾಟ ಮಾಡಿದ ಕಾರಣ ರಾಜ್ಯ ಸರ್ಕಾರವು ಮರಾಠ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಿದೆ. ಡಿಸೆಂಬರ್ 5ರಂದು ಕರೆ ನೀಡಿರುವ ಬಂದ್ ವಾಪಸ್ ಪಡೆಯಬೇಕೆಂದು ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಕನ್ನಡಪರ ಸಂಘಟನೆಗಳ ಮುಖಂಡರಿಗೆ ಮನವಿ ಮಾಡಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಪಸ್ವರ ಬೇಡ; ಯಶವಂತರಾವ್ ಜಾಧವ್ - Davanagere latest news
ಆರ್ಥಿಕವಾಗಿ ಹಿಂದುಳಿದ ಕಾರಣ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕ್ರಮ ಕೈಗೊಂಡಿದೆ. ಮರಾಠ ಜನಾಂಗದ ಇತಿಹಾಸ ತಿಳಿಯದವರು ಈ ರೀತಿ ಖಂಡಿಸುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತಿರುವುದು ವಿಷಾದಕರ ಎಂದು ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆಯಷ್ಟು ಮರಾಠ ಸಮುದಾಯದ ಜನರಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ ವಿರೋಧ ಮಾಡಿರುವುದು ಸರಿಯಲ್ಲ. ಭಾಷೆ ಅಭಿವೃದ್ಧಿಗೆ ಪ್ರಾಧಿಕಾರ ಮಾಡಿಲ್ಲ. ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿರುವುದು ವಿಷಾದಕರ. ಪ್ರಾಧಿಕಾರ ರಚನೆಗೆ ಅಪಸ್ವರ ಸಲ್ಲದು ಎಂದು ಹೇಳಿದರು.
ಎಂಇಎಸ್ ನಿಷೇಧಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಕಳೆದ 500 ವರ್ಷಗಳ ಹಿಂದೆ ವಲಸೆ ಬಂದ ನಮ್ಮ ಹಿರಿಕರು ಇಲ್ಲೇ ಜೀವಿಸಿದ್ದಾರೆ. ಮನೆಯಲ್ಲಿಯೂ ಮರಾಠರು ಕನ್ನಡವನ್ನೇ ಮಾತನಾಡುತ್ತಾರೆ. ನಾವ್ಯಾರೂ ಮರಾಠಿ ಭಾಷೆ ಮಾತನಾಡಲ್ಲ. ಮರಾಠ ಜನಾಂಗದ ಇತಿಹಾಸ ತಿಳಿಯದವರು ಈ ರೀತಿ ಖಂಡಿಸುತ್ತಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ ಎಂದು ಜಾಧವ್ ಹೇಳಿದರು.