ಹರಿಹರ:ಆರೋಗ್ಯದ ದೃಷ್ಟಿಯಿಂದ ಕೋವಿಡ್ ಪರೀಕ್ಷೆ ಅನಿವಾರ್ಯವಾಗಿದ್ದು, ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಆಪತ್ತು ತರುತ್ತದೆ ಎಂದು ಹಿರಿಯ ಆರೋಗ್ಯ ಸಹಾಯಕ ಎಂ.ವಿ. ಹೊರಕೇರಿ ಎಚ್ಚರಿಕೆ ನೀಡಿದರು.
ನಗರದ ಎಸ್ಬಿಐ ಬ್ಯಾಂಕ್ ಆವರಣದಲ್ಲಿ ಗ್ರಾಹಕರಿಗಾಗಿ ಆರಂಭಿಸಲಾದ ಗಂಟಲು ದ್ರವ ಸಂಗ್ರಹ ಕೇಂದ್ರದಲ್ಲಿ ಮಾತನಾಡಿದ ಅವರು, ಯಾರೋ ಒತ್ತಾಯ ಮಾಡಿದರೆಂದು ಪರೀಕ್ಷೆ ಮಾಡಿಸಬೇಡಿ. ನಿಮ್ಮ ಕುಟುಂಬದ ರಕ್ಷಣೆಗಾಗಿ ಪರೀಕ್ಷೆ ಮಾಡಿಸಬೇಕು ಎಂದರು.
ಬಿಸಿ ನೀರು, ಬಿಸಿ ಊಟ ಸೇವಿಸಿ
ಕೋವಿಡ್-19 ರೋಗದ ಬಗ್ಗೆ ಭಯ ಬೇಡ, ಮುಂಜಾಗ್ರತೆ ಇರಲಿ. ಕಡ್ಡಾಯವಾಗಿ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಿ. ಬಿಸಿ ಊಟ, ಬಿಸಿ ನೀರು ಕುಡಿಯಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಜ್ಜರ, ಕೆಮ್ಮು, ಶೀತ, ಗಂಟಲು ತೊಂದರೆ ಇದ್ದರೆ ತಕ್ಷಣ ಚಿಕಿತ್ಸೆ ಪಡೆಯಿರಿ. ರೋಗ ಬಂದ ಮೇಲೆ ಯೋಚಿಸುವುದಕ್ಕಿಂತ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಸಲಹೆ ನೀಡಿದರು.
ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಲಂಬೋದರ ಮಿಶ್ರ ಮಾತನಾಡಿ, ನಮ್ಮ ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಕೋವಿಡ್ ತಪಾಸಣಾ ಕೇಂದ್ರವನ್ನು ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ, ಉಪ ವ್ಯವಸ್ಥಾಪಕ ಅಯ್ಯಪ್ಪ, ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಹೆಚ್.ಪಾಟೀಲ್, ಆರೋಗ್ಯ ಇಲಾಖೆಯ ಉಮ್ಲಾ ನಾಯ್ಕ್, ಶಶಿಧರ್ ಸೇರಿದಂತೆ ಇತರರು ಇದ್ದರು.