ದಾವಣಗೆರೆ:ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಶ್ರೀಪಾದರ ಬಗ್ಗೆ ಅಪಾರ ಗೌರವವಿದೆ. ನಾಡಿನ ಹಿರಿಯ ಯತಿಗಳು ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಪದೇ ಪದೆ ಪಂಥಾಹ್ವಾನ ನೀಡುವುದು ಸರಿಯಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ.
ಪದೇ ಪದೆ ಪಂಥಾಹ್ವಾನ ನೀಡಬೇಡಿ: ಪೇಜಾವರ ಶ್ರೀ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ - ಪೇಜಾವರ ಶ್ರೀಗಳಿಂದ ಪಂಥಾಹ್ವಾನ
ಪೇಜಾವರ ಶ್ರೀಗಳು ಪದೇ ಪದೆ ಪಂಥಾಹ್ವಾನ ನೀಡುತ್ತಿದ್ದಾರೆ. ಅದರ ಅವಶ್ಯಕತೆ ಇಲ್ಲ. ಅವರ ಪ್ರಶ್ನೆಗೆ ಬಸವಣ್ಣನವರೇ ಉತ್ತರ ನೀಡಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹರಿಹಾಯ್ದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಲಿಂಗಾಯತ ಧರ್ಮ ಮಾಡಿಯೇ ನಾವು ತೀರುತ್ತೇವೆ. ಬಹಿರಂಗ ಚರ್ಚೆಗೆ ಪೇಜಾವರ ಶ್ರೀಗಳು ಪಂಥಾಹ್ವಾನ ನೀಡಿದ್ದಾರೆ. ಶ್ರೀಗಳ ಪ್ರಶ್ನೆಗೆ 12ನೇ ಶತಮಾನದಲ್ಲಿ ಬಸವಣ್ಣನವರೇ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು. 12ನೇ ಶತಮಾನದಲ್ಲಿ ವರ್ಣಾಶ್ರಮ ಧರ್ಮ ಬಿಟ್ಟು ಹೊಸ ಧರ್ಮವನ್ನು ಬಸವಣ್ಣ ಸ್ಥಾಪಿಸಿದ್ದಾರೆ. ಲಿಂಗಾಯತ ಧರ್ಮದ ಆಚರಣೆಗೂ, ವರ್ಣಾಶ್ರಮದ ಧರ್ಮಕ್ಕೂ ವ್ಯತ್ಯಾಸವಿದೆ. ಪೇಜಾವರ ಶ್ರೀಗಳು ವೈಷ್ಣವ ಪಂಥ ಅನುಸರಿಸುತ್ತಿದ್ದು, ಇದು ವರ್ಣಾಶ್ರಮಕ್ಕೆ ಪ್ರೋತ್ಸಾಹ ಕೊಡುತ್ತದೆ. ಮೇಲು - ಕೀಳು, ಲಿಂಗ ಬೇಧ ಅದರಲ್ಲಿದೆ. ಆದರೆ, ಲಿಂಗಾಯತ ಧರ್ಮದಲ್ಲಿ ಇವಾವುದು ಇಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ನೀಡಿರುವ ವರದಿಯಲ್ಲಿ ಎಲ್ಲಾ ವಿಚಾರಗಳೂ ಇವೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿರುವ ಲಿಂಗಾಯತ ಮಠಗಳಿಗೆ ಭೇಟಿ ನೀಡಿ ಲಿಂಗಾಯತ ಧರ್ಮವನ್ನು ಅರಿತು ಗೌರವಿಸಬೇಕು ಎಂದಿದ್ದಾರೆ. ಇನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿರುವ ಕಾರಣ ಸ್ವತಂತ್ರ ಧರ್ಮಕ್ಕೆ ಸಂಬಂಧಿಸಿದಂತೆ ಹೆಚ್ಚು ಉತ್ಸುಕರಾಗಿಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.