ದಾವಣಗೆರೆ: ಅಪಘಾತದಲ್ಲಿ ಮೃತಪಟ್ಟ ಯುವಕನ ಮನೆಗೆ ಬಂದ ಶ್ವಾನವೊಂದು ಕುಟುಂಬಸ್ಥರಿಗೆ ಸಾಂತ್ವನ ಹೇಳುವ ರೀತಿಯಲ್ಲಿ ವರ್ತಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಕಾರ್ಯನಿಮಿತ್ತ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ತೆರಳುತ್ತಿದ್ದ ಯುವಕ ತಿಪ್ಪೇಶ್ (21) ಬೈಕ್ನಿಂದ ಬಿದ್ದು ಮೃತಪಟ್ಟಿದ್ದರು. ಶ್ವಾನ ಅಡ್ಡ ಬಂದಿದ್ದರಿಂದ ಈ ಅಪಘಾತ ಸಂಭವಿಸಿತ್ತು ಎಂದು ತಿಳಿದುಬಂದಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ. ಇದೀಗ ಮೃತ ತಿಪ್ಪೇಶನ ಮನೆಯನ್ನು ಹುಡುಕಿಕೊಂಡು ಶ್ವಾನವೊಂದು ಬಂದಿದ್ದು, ಕುಟುಂಬಸ್ಥರಿಗೆ ತನ್ನದೇ ಭಾಷೆಯಲ್ಲಿ ಸಮಾಧಾನಿಸುವಂತೆ ವರ್ತಿಸಿದೆ. ಈ ವಿಸ್ಮಯಕ್ಕೆ ಕುಟುಂಬಸ್ಥರು ಸೇರಿ ಗ್ರಾಮಸ್ಥರೆಲ್ಲ ಅಚ್ಚರಿಗೊಂಡಿದ್ದಾರೆ.
ಕಳೆದ ಗುರುವಾರ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಯುವಕ ತಿಪ್ಪೇಶ್ ತನ್ನ ಸಹೋದರಿಯನ್ನು ಬಿಟ್ಟು ಬರಲು ತೆರಳಿದ್ದರು. ಹೀಗೆ ಬಿಟ್ಟು ವಾಪಸ್ ಬರುವಾಗ ಹೊನ್ನಾಳಿ ತಾಲೂಕಿನ ಕುರುಬರ ವಿಟ್ಲಾಪುರದ ಬಳಿ ಬೈಕ್ಗೆ ಇದೇ ಶ್ವಾನ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು. ಆತ ಮೃತಪಟ್ಟ ಮೂರನೇ ದಿನಕ್ಕೆ ಅದೇ ಶ್ವಾನ ಅಚ್ಚರಿಯಂತೆ ಆತನಿದ್ದ ಮನೆಗೆ ಆಗಮಿಸಿದೆ. ಮನೆಯ ಕೊಠಡಿ, ಅಡುಗೆ ಮನೆಯನ್ನೆಲ್ಲ ಸುತ್ತಾಡಿದೆ. ಮೃತ ವ್ಯಕ್ತಿಯ ತಾಯಿಯನ್ನು ಸಂತೈಸುತ್ತಿರುವ ದೃಶ್ಯ ನಮಗೆ ಅಚ್ಚರಿ ತರಿಸಿತು ಎನ್ನುತ್ತಾರೆ ಮೃತನ ಮಾವ ಸಂದೀಪ್.