ದಾವಣಗೆರೆ:ಜೆಜೆಎಂ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟದಲ್ಲಿ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಂಗೆಟ್ಟಿದ್ದು, ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಶಿಷ್ಯವೇತನ ನೀಡದಿದ್ದರೆ ಕೋವಿಡ್ ಹೊರತುಪಡಿಸಿ ಇನ್ನುಳಿದ ಸೇವೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಮುಷ್ಕರನಿರತರು ಎಚ್ಚರಿಕೆ ನೀಡಿದ್ದಾರೆ.
"ಸಹನೆ ಕೆಣಕಬೇಡಿ...ಇನ್ನೆರಡು ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಸೇವೆ ನಿಲ್ಲಿಸುತ್ತೇವೆ" ನಗರದ ಜಯದೇವ ವೃತ್ತದಲ್ಲಿ ಮುಷ್ಕರ ಮುಂದುವರಿಸಿರುವ ಡಾಕ್ಟರ್ಸ್ ಹಾಗೂ ಪಿಜಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಫೇಸ್ ಬುಕ್ ಲೈವ್ ನೀಡುವ ಸುಧಾಕರ್ ಅವರಿಗೆ ನಮ್ಮ ಕಷ್ಟ ಅರ್ಥವಾಗುತ್ತಿಲ್ಲ. ಕನಿಷ್ಟ ಸೌಜನ್ಯಕ್ಕಾದರೂ ಇಲ್ಲಿಗೆ ಬಂದು ಸಮಸ್ಯೆ ಆಲಿಸಲಿಲ್ಲ. ನಿಮ್ಮನ್ನು ಇದಕ್ಕೇನು ವೈದ್ಯಕೀಯ ಶಿಕ್ಷಣ ಸಚಿವರನ್ನಾಗಿ ಮಾಡಿರುವುದು?. ನಮ್ಮನ್ನು ಜೀತದಾಳುಗಳಂತೆ ರಾಜ್ಯ ಸರ್ಕಾರ ಕಾಣುತ್ತಿದೆ ಎಂದು ಆರೋಪಿಸಿದರು.
"ತಮಟೆ ಬಾರಿಸಿ ಚಪ್ಪಾಳೆ ತಟ್ಟಿ" ವಿನೂತನ ಪ್ರತಿಭಟನೆ:
ಕಳೆದ ಹನ್ನೊಂದು ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರಕ್ಕೆ ಕಣ್ಣಿಲ್ಲ. ಕಿವಿಯೂ ಇಲ್ಲ ಎಂದು ಸಂಭೋದಿಸುವ ಸಲುವಾಗಿ 11.11 ನಿಮಿಷಕ್ಕೆ "ತಮಟೆ ಮತ್ತು ಚಪ್ಪಾಳೆ" ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳೆಲ್ಲ ಸೇರಿ 230 ಮಂದಿ ಇದ್ದೇವೆ. ಕೊರೊನಾ ಸೋಂಕು ತಡೆಗಾಗಿ ನಾವೂ ಹಗಲಿರುಳು ಶ್ರಮಿಸುತ್ತಿದ್ದೇವೆ. ಆದರೂ ಸರ್ಕಾರ ಇತ್ತ ಗಮನ ಹರಿಸದಿರುವುದು ಬೇಸರ ತರಿಸಿದೆ ಎಂದು ವೈದ್ಯರು ಹೇಳಿದ್ದಾರೆ.
ಜೆಜೆಎಂ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಶಿಷ್ಯವೇತನ ನೀಡಲು ಆಗದು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುತ್ತೇವೆ. ನಮ್ಮ ಸಹನೆ ಕಟ್ಟೆಯೊಡೆಯಲು ಬಿಡಬೇಡಿ. ನಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆಲೋಚನೆಗಿಂತ ಈಗಿನ ಸಮಸ್ಯೆಯೇ ಹೆಚ್ಚಾಗಿದೆ. ಕಾಲೇಜು ಶುಲ್ಕ, ದಿನನಿತ್ಯದ ಖರ್ಚಿಗೂ ಪರದಾಡುವಂಥ ಸ್ಥಿತಿ ನಿರ್ಮಾಣ ಆಗಿದೆ ಎಂದು ಮುಷ್ಕರನಿರತರು ಅಳಲು ತೋಡಿಕೊಂಡರು.