ದಾವಣಗೆರೆ:ಕೊರೊನಾ ವಿರುದ್ಧದ ಹೋರಾಟದಿಂದ ಹಿಂದೆ ಸರಿಯಲ್ಲ. ನಮಗೂ ಮಾನವೀಯತೆ ಇದೆ. ಒಪಿಡಿ, ತುರ್ತು ಸೇವೆಗಳ ಬಹಿಷ್ಕಾರ ಮಾಡಿದ್ದೇವೆ. ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಬಿಟ್ಟರೆ ಬೇರೇನೂ ಉಳಿದಿಲ್ಲ. ಸೆಲೆಬ್ರಿಟಿಗಳು, ಸಾಮಾನ್ಯ ಜನರಿಗೆ ಅರ್ಥವಾಗುವ ಸಂಕಷ್ಟ ಸರ್ಕಾರಕ್ಕೆ ಏಕೆ ಆಗುತ್ತಿಲ್ಲ. ಮನೆಯಲ್ಲಿ ಸಮಸ್ಯೆ, ಖರ್ಚಿಗೂ ಹಣ ಇಲ್ಲ. ಇನ್ನು ಲಿಖಿತವಾಗಿ ಭರವಸೆ ನೀಡುವವರೆಗೂ ನಮ್ಮ ಮುಷ್ಕರ ಕೈಬಿಡುವುದಿಲ್ಲ.
ಇದು ಜಯದೇವ ವೃತ್ತದಲ್ಲಿ 16 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಪಟ್ಟು. ಮುಷ್ಕರಕ್ಕೆ ನಟ ಚೇತನ್, ಕ್ರಿಕೆಟಿಗ ವಿನಯ್ ಕುಮಾರ್, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ಆದರೂ, ಬೇಡಿಕೆ ಈಡೇರುವ ಲಕ್ಷಣ ಗೋಚರಿಸುತ್ತಿಲ್ಲ ಎಂದು ಈಟಿವಿ ಭಾರತಕ್ಕೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹೋರಾಟ ಮತ್ತಷ್ಟು ತೀವ್ರಗೊಳಿಸಿರುವ ವೈದ್ಯರು ಇಲ್ಲಿರುವ ಬಹುತೇಕರು ಮಧ್ಯಮ ಹಾಗೂ ಬಡತನದ ಹಿನ್ನೆಲೆ ಉಳ್ಳಂಥವರೇ. ಮನೆಯಲ್ಲಿ ತಂದೆ-ತಾಯಿಯ ಪಿಂಚಣಿಯಲ್ಲಿಯೇ ಜೀವನ ಸಾಗಬೇಕು. ಶಿಷ್ಯವೇತನವೇ ವಿದ್ಯಾರ್ಥಿಗಳ ಖರ್ಚಿಗೆ ಇರುವ ಮೂಲ. ಹದಿನಾರು ತಿಂಗಳಿಂದ ಶಿಷ್ಯವೇತನ ಬಿಡುಗಡೆ ಆಗಲೇ ಇಲ್ಲ. ಪೆಟ್ರೋಲ್, ಊಟ, ಕಾಲೇಜು ಶುಲ್ಕ ಕಟ್ಟಲು ಹಣ ಇಲ್ಲ. ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕೊರೊನಾಕ್ಕೆ ಸಂಬಂಧಿತ ಕರ್ತವ್ಯ ಬಹಿಷ್ಕಾರ ಮಾಡುವುದಿಲ್ಲ ಎನ್ನುತ್ತಾರೆ ಮುಷ್ಕರ ನಿರತರು.
ಸರ್ಕಾರ ಶಿಷ್ಯವೇತನ ನೀಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಆಡಳಿತ ಮಂಡಳಿಯೂ ಈ ಬಗ್ಗೆ ನಿಖರವಾದ ಭರವಸೆ ನೀಡಿಲ್ಲ. ಈ ಬಿಕ್ಕಟ್ಟಿನಲ್ಲಿ ಪರದಾಡುತ್ತಿರುವುದು ನಾವು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ದಾವಣಗೆರೆ ಡಿಸಿಗೆ ಸಮಸ್ಯೆ ಬಗೆಹರಿಸುವಂತೆ ಹೇಳಿರುವುದು ಹಾಗೂ ಆಡಳಿತ ಮಂಡಳಿ ಜೊತೆಗಿನ ಸಭೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸುತ್ತದೆ ಎಂಬ ವಿಶ್ವಾಸ ಇದೆ. ಹದಿನಾರು ತಿಂಗಳ ಒಟ್ಟು ಶಿಷ್ಯವೇತನ ಸುಮಾರು ₹7 ಕೋಟಿ ಬಿಡುಗಡೆ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.