ದಾವಣಗೆರೆ:ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
23 ವರ್ಷದ ಭವಾನಿ ಮೃತಪಟ್ಟಿರುವ ಗರ್ಭಿಣಿ. ಇವರಿಗೆ ಕಳೆದ ಎರಡು ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ, ವೆಂಟಿಲೇಟರ್ ಸರಿಯಾಗಿ ನೀಡದ ಕಾರಣ ಭವಾನಿ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಗರ್ಭಿಣಿ ಸಾವು ಐದು ವರ್ಷಗಳ ಹಿಂದೆ ಸಂತೋಷ್ ಎಂಬುವರ ಜೊತೆ ಭವಾನಿ ವಿವಾಹವಾಗಿತ್ತು. ಈ ಮೊದಲು 8 ತಿಂಗಳ ಗರ್ಭಿಣಿಯಾಗಿದ್ದಾಗ ಮಗು ಕಳೆದುಕೊಂಡಿದ್ದ ಭವಾನಿ, ಈಗ ಮತ್ತೆ ಗರ್ಭಿಣಿಯಾಗಿದ್ದ ಆಕೆ ಬಾರದಲೋಕಕ್ಕೆ ತೆರಳಿದ್ದಾಳೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾದ ಆಸ್ಪತ್ರೆ ಸಿಬ್ಬಂದಿ ಹಾಗೂ ಮುಖ್ಯಸ್ಥರೊಂದಿಗೆ ಮೃತಳ ಸಂಬಂಧಿಕರು ಮಾತಿನ ಚಕಮಕಿ ನಡೆಸಿದರು.
ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇದೆ. ಆದರೆ, ಗರ್ಭಿಣಿಯನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ. ಒಂದು ವೇಳೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಸ್ಪತ್ರೆ ಅಧೀಕ್ಷಕ ನಾಗರಾಜ್ ಹೇಳಿದ್ದಾರೆ.