ದಾವಣಗೆರೆ:ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಹೇಳನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ ಮುಖಂಡರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿರುವ ಕಾಂಗ್ರೆಸ್ ಮುಖಂಡ ವೈ.ರಾಮಪ್ಪ ವಿರುದ್ಧ ಮಾಯಕೊಂಡ ಬಿಜೆಪಿ ಅಹಿಂದ ಘಟಕ ಕಿಡಿಕಾರಿದೆ.
ಅಹಿಂದ ವರ್ಗ ದುರ್ಬಳಕೆ ಮಾಡಿಕೊಳ್ಳಬೇಡಿ: ಬಿಜೆಪಿ ಅಹಿಂದ ಘಟಕ
ಬಲಿಷ್ಠ ಸಮಾಜದ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ವೈ.ರಾಮಪ್ಪ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಅಹಿಂದ ಮುಖಂಡರು ಅಗ್ರಹಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಹಿಂದ ಮುಖಂಡರು, ಬಲಿಷ್ಠ ಸಮಾಜದ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರಾಮಪ್ಪ ಕೂಡಲೇ ಕ್ಷಮೆಯಾಚಿಸಬೇಕು. ಅದನ್ನು ಬಿಟ್ಟು ಬೇರೆ ಬೇರೆ ಕಾರಣ ನೀಡುತ್ತಾ ಅಹಿಂದ ವರ್ಗ ದಾರಿ ತಪ್ಪಿಸುವುದು ಬೇಡ. ನಾವು ಕೂಡ ನೇರ್ಲಗಿ ಗ್ರಾಮದಲ್ಲಿ ರಾಮಪ್ಪ ಮಾತನಾಡಿರುವ ವಿಡಿಯೋದಲ್ಲಿರುವ ಮಾತುಗಳನ್ನು ಕೇಳಿದ್ದೇವೆ. ಅವರು ಅಸಂವಿಧಾನಿಕ ಪದ ಬಳಸಿದ್ದಾರೆ ಎಂದು ಆರೋಪಿಸಿದರು. ಯಾವುದೇ ಕಾರಣಕ್ಕೂ ಯಾರೂ ಅಹಿಂದ ವರ್ಗದ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ್ ನಾಯ್ಕ್, ರಾಮಪ್ಪ ಮಾತನಾಡಿರುವ ವಿಡಿಯೋ ಹೊರ ಬಂದ ಬಳಿಕ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಶಿಕ್ಷಣಕ್ಕೆ ವೀರಶೈವ ಸಮಾಜ ತನ್ನದೇ ಆದ ಕೊಡುಗೆ ನೀಡಿದೆ. ಇದನ್ನು ನಾವು ಯಾವತ್ತೂ ಮರೆಯಬಾರದು. ಏಪ್ರಿಲ್ 23ರಂದು ಬಿಜೆಪಿ ಕಾರ್ಯಕರ್ತರನ್ನು ರಾಮಪ್ಪ ತೇಜೋವಧೆ ಮಾಡಿದ್ದಾರೆ. ಅದೇ ರೀತಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ನಾಯಕರೆನಿಸಿಕೊಂಡ ರಾಮಪ್ಪರಿಗೆ ಶೋಭೆ ತರುವಂಥಹದ್ದಲ್ಲ. ಅವರು ಈ ಕುರಿತು ಕ್ಷಮೆ ಕೇಳಬೇಕು ಎಂದರು.