ಕರ್ನಾಟಕ

karnataka

ETV Bharat / state

ಗ್ರಾ.ಪಂ.ಚುನಾವಣೆ ಹಿನ್ನೆಲೆ: ಅಕ್ರಮ ಮದ್ಯ ತಡೆಗೆ ಜಂಟಿ ಕಾರ್ಯಾಚರಣೆ ನಡೆಸುವಂತೆ ಡಿಸಿ ಸೂಚನೆ - District Coordination Committee Meeting davangere

ದಾವಣಗೆರೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕಳ್ಳಭಟ್ಟಿ ನಿರ್ಮೂಲನೆ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಸಲಾಗಿದ್ದು, ಈ ಸಂದರ್ಭ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಲ್ಲೆಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಮಾರಾಟ ನಡೆಯುತ್ತದೆ ಎಂದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

davangere
ಜಿಲ್ಲಾ ಸಮನ್ವಯ ಸಮಿತಿ ಸಭೆ

By

Published : Dec 5, 2020, 5:24 PM IST

ದಾವಣಗೆರೆ: ಗ್ರಾಮ ಪಂಚಾಯತ್ ಚುನಾವಣೆ ವೇಳೆ ಅಕ್ರಮ ಹಾಗೂ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳಭಟ್ಟಿ ನಿರ್ಮೂಲನೆ ಮಾಡಲು ಶ್ರಮಿಸುವಂತೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಇಂದು ಏರ್ಪಡಿಸಲಾದ ಕಳ್ಳಭಟ್ಟಿ ನಿರ್ಮೂಲನೆ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚಾಯತ್ ಚುನಾವಣೆ ವೇಳೆ ಕಾನೂನು ಸುವ್ಯವಸ್ಥೆ ಹಾಗೂ ಚುನಾವಣಾ ಅಕ್ರಮ ತಡೆಗಟ್ಟಲು ಕಳ್ಳಭಟ್ಟಿ ಸಾರಾಯಿ, ಅಕ್ರಮ ಮದ್ಯ ಮಾರಾಟ, ಮಾದಕ ವಸ್ತುಗಳ ಸಾಗಣೆ ತಡೆಗಟ್ಟುವುದು ಅತಿ ಅವಶ್ಯಕ ಎಂದರು.

ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಬಳಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ. ಕಳ್ಳಭಟ್ಟಿ ಸಾರಾಯಿ, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಅಲ್ಲಲ್ಲಿ ಗಾಂಜಾ ಬೆಳೆ ಬೆಳೆಯುತ್ತಿರುವ ಕುರಿತು ದೂರು ಕೇಳಿ ಬರುತ್ತಿದೆ. ಜನಸ್ಪಂದನ ಸಭೆಗಳಲ್ಲಿ ಸ್ಥಳೀಯರಿಂದ ಇಂತಹ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಯು ಈ ತಿಂಗಳ ಒಳಗಾಗಿ ವಿಶೇಷ ಜಂಟಿ ಕಾರ್ಯಾಚರಣೆ ನಡೆಸಿ, ಎಲ್ಲೆಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಮಾರಾಟ ನಡೆಯುತ್ತದೆ ಎಂದು ಪತ್ತೆ ಹಚ್ಚಬೇಕು ಎಂದು ಹೇಳಿದರು.

ಮಣ್ಣಿನ ಮಾಲಿನ್ಯದಿಂದ ಆರೋಗ್ಯ ಮತ್ತು ಆಹಾರ ಸುರಕ್ಷತೆಗೆ ಅಪಾಯ: UNEP ವರದಿ

ಅಬಕಾರಿ ಕಾಯ್ದೆ ಉಲ್ಲಂಘನೆ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಡಾಬಾಗಳು, ಮಾಂಸಾಹಾರಿ ಹೋಟೆಲ್​​ಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಗ್ರಾಮಗಳು, ತಾಂಡಾಗಳಲ್ಲಿ ಎಲ್ಲೆಲ್ಲಿ ಕಳ್ಳಭಟ್ಟಿ ಸಾರಾಯಿ, ಮಾಂಸಾಹಾರ ಡಾಬಾ, ಹೊಟೇಲ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುತ್ತದೆ ಎನ್ನುವ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದೇ ಇರುತ್ತದೆ. ಹೀಗಾಗಿ ಮಾಹಿತಿದಾರರಿಂದ ವಿವರ ಸಂಗ್ರಹಿಸಿ, ಗ್ರಾಮ ಹಾಗೂ ತಾಂಡಾಗಳ ಮೇಲೆ ದಾಳಿ ನಡೆಸಬೇಕು ಎಂದರು.

ಗ್ರಾಮ ಪಂಚಾಯತ್ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ, ಅಬಕಾರಿ ಇಲಾಖೆಯವರು ನಿತ್ಯ ನಡೆಸಿದ ದಾಳಿ ವಿವರ, ವಶಕ್ಕೆ ಪಡೆದ ಕಳ್ಳಭಟ್ಟಿ, ಮದ್ಯ, ಗಾಂಜಾ ಮುಂತಾದ ಸಾಮಗ್ರಿಗಳ ಅಂಕಿ - ಅಂಶಗಳ ವಿವರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಅಕ್ರಮ ಮದ್ಯ ತಡೆಗೆ ಕಂಟ್ರೋಲ್ ರೂಂ:

ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆ ಪ್ರಕರಣಗಳನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಅಬಕಾರಿ ಇಲಾಖೆಯು ಕಂಟ್ರೋಲ್ ರೂಂ ಸ್ಥಾಪಿಸಿದ್ದು, 08192-235316 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಕೆ, ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆ ಕುರಿತಂತೆ ಮಾಹಿತಿ ಇದ್ದಲ್ಲಿ, ಕಂಟ್ರೋಲ್ ರೂಂ ದೂರವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

ಜಿಲ್ಲೆಯಲ್ಲಿ ಕಳೆದ ವರ್ಷ ನಿಯಮ ಉಲ್ಲಂಘನೆಗಾಗಿ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್‍ಗಳಿಗೆ ಸಂಬಂಧಿಸಿದಂತೆ 710 ಪ್ರಕರಣ ದಾಖಲಿಸಿ 8.95 ಲಕ್ಷ ರೂ. ದಂಡ ಸಂಗ್ರಹಿಸಲಾಗಿತ್ತು. ಈ ವರ್ಷ 280 ಪ್ರಕರಣ ದಾಖಲಿಸಿ 2.78 ಲಕ್ಷ ದಂಡ ವಸೂಲಾಗಿದೆ ಎಂದು ಅಬಕಾರಿ ಇಲಾಖೆ ಜಿಲ್ಲಾ ಆಯುಕ್ತ ಎಸ್. ಶಿವಪ್ರಸಾದ್ ಹೇಳಿದರು.

ABOUT THE AUTHOR

...view details