ದಾವಣಗೆರೆ:ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ರೋಗಿಯ ಸಂಬಂಧಿಕರೊಬ್ಬರ ಕಾಲಿಗೆ ಬೀಳಲು ಮುಂದಾದ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.
ರೋಗಿ ಸಂಬಂಧಿಕರೊಬ್ಬರ ಕಾಲಿಗೆ ಬೀಳಲು ಮುಂದಾದ ಡಿಸಿ !
ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಪರಿಶೀಲನೆಗೆಂದು ಬಂದಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ರೋಗಿಯ ಸಂಬಂಧಿಕರೊಬ್ಬರ ಕಾಲಿಗೆ ಬೀಳಲು ಮುಂದಾದ ಘಟನೆ ನಡೆಯಿತು.
ಕಳೆದ ಎರಡು ದಿನಗಳಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕೋವಿಡ್ ಟೆಸ್ಟ್ ಮಾಡಿಸಿ, ಬಳಿಕವೇ ಚಿಕಿತ್ಸೆ ನೀಡುವುದು ಎಂದು ಹೇಳಿ ಕಳುಹಿಸುತ್ತಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಗೆ ಬಂದರೆ ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಜೊತೆಗೆ ಇಲ್ಲಿಯೂ ಸಮರ್ಪಕ ಚಿಕಿತ್ಸೆ ದೊರೆತಿಲ್ಲ ಎಂದು ಉಚ್ಚೆಂಗಪ್ಪ ಕೈಮುಗಿದು ಕಣ್ಣೀರು ಹಾಕುತ್ತಾ ಡಿಸಿ ಮುಂದೆ ಅಳಲು ತೋಡಿಕೊಂಡರು.
ಆಗ "ನಾನೇ ನಿನ್ನ ಕಾಲಿಗೆ ಬೀಳುತ್ತೇನೆ. ಎಲ್ಲೆಲ್ಲಿ ಓಡಾಡಿದ್ದೀಯಂತ ಗೊತ್ತು. ಸೂಕ್ತ ಚಿಕಿತ್ಸೆ ನೀಡಿಸುತ್ತೇನೆ. ಕೈಮುಗಿದು ಬೇಡುತ್ತೇನೆ. ಅಳಬೇಡ. ಅಳಬೇಡ...' ಎನ್ನುತ್ತಾ ಡಿಸಿ ಅವರೇ ಉಚ್ಚೆಂಗಪ್ಪರ ಕಾಲಿಗೆ ಬೀಳಲು ಮುಂದಾದರು. ಸ್ಥಳದಲ್ಲಿದ್ದವರೆಲ್ಲಾ ಒಂದು ಕ್ಷಣ ಅವಕ್ಕಾದರು. ಎಲ್ಲವನ್ನು ಸರಿ ಮಾಡುತ್ತೇನೆ. ನಿಮ್ಮವರನ್ನ ಅಡ್ಮಿಟ್ ಮಾಡಿಕೊಂಡಿದ್ದೇವೆ. ಚಿಂತೆ ಮಾಡಬ್ಯಾಡ ಎಂದು ಹೇಳಿ ಡಿಸಿ ಸಮಾಧಾನಪಡಿಸಿದರು.