ಹರಿಹರ(ದಾವಣಗೆರೆ):ಹರಿಹರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶವಾದ ಗಂಗಾನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನೆರೆ ಸಂತ್ರಸ್ತರಿಗೆ ಶೀಘ್ರವೇ ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದರು.
ಗಂಗಾನಗರ ನೆರೆ ಸಂತ್ರಸ್ತರಿಗೆ ಶೀಘ್ರವೇ ವಸತಿ ಕಲ್ಪಿಸಲಾಗುವುದು: ಡಿಸಿ ಮಹಾಂತೇಶ್ ಬೀಳಗಿ - ದಾವಣಗೆರೆ ಸುದ್ದಿ
ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ, ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಗಂಗಾನಗರ ನಿವಾಸಿಗಳು, ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ನಮಗೆ ಈ ಗೋಳು ತಪ್ಪಿದ್ದಲ್ಲ. ಆದ್ದರಿಂದ ನಮಗೆ ಶಾಶ್ವತವಾದ ಸೂರು ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈಗಾಗಲೇ ನಿವೇಶನಗಳಿಗಾಗಿ ಜಮೀನನ್ನು ಗುರುತಿಸಲಾಗಿದೆ. ಶಾಸಕರ ನೇತೃತ್ವದಲ್ಲಿ ವಸತಿ ಸೌಲಭ್ಯ ನೀಡುವ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು. ಬಳಿಕ ನಗರದ ಹೊರವಲಯದ ಗುತ್ತೂರಿನ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ಅವರು, ಅಲ್ಲಿರುವ ಸೋಂಕಿತರ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮಹಾಂತೇಶ್ ಬೀಳಗಿ, ಯಾವುದೇ ರೀತಿಯ ಭಯ-ಭೀತಿಗೆ ಒಳಗಾಗದೇ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಪತ್ತೆಯಾದ ವ್ಯಕ್ತಿಗಳು ತಕ್ಷಣ ಸರಿಯಾದ ಚಿಕಿತ್ಸೆ ಪಡೆದು ಗುಣಮುಖವಾಗಬೇಕು. ಯುವಕರು ತಮ್ಮ ಮನೆಗಳಲ್ಲಿರುವ ಹಿರಿಯರು ಮತ್ತು ಕುಟುಂಬಸ್ಥರ ಬಗ್ಗೆ ಕಾಳಜಿ ವಹಿಸಬೇಕು. ಅವರು ಆದಷ್ಟು ಹೊರಗಡೆ ಹೋಗದಂತೆ ಗಮನ ಹರಿಸಬೇಕು. ಹೊರಗಡೆ ಹೋಗಲೇ ಬೇಕಾದ ಪ್ರಸಂಗ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಹೋಗುವಂತೆ ಮನವೊಲಿಸಬೇಕು ಎಂದರು.