ದಾವಣಗೆರೆ:ಲೋಕ ಕಲ್ಯಾಣಕ್ಕಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮಾಡಿಸಿದ ಹೋಮ ಹವನ ಇದೀಗ ಸಂಕಷ್ಟಕ್ಕೀಡು ಮಾಡಿದೆ. ಹೋಮ ನೆರವೇರಿಸಿದ್ದರಿಂದ ಜಿಲ್ಲಾಡಳಿತ ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿ ಧನ್ವಂತರಿ ಹಾಗೂ ಮೃತ್ಯುಂಜಯ ಹೋಮ ಮಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಶಾಸಕ ರೇಣುಕಾಚಾರ್ಯ ಅವರಿಗೆ ಜಿಲ್ಲಾಡಳಿತದಿಂದ ಶೋಕಾಸ್ ನೋಟಿಸ್ ನೀಡಲಾಗಿದ್ದು, ವಿಪತ್ತು ನಿರ್ವಹಣೆ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಈ ಬಗ್ಗೆ ಹೊನ್ನಾಳಿ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದ್ದು, ಹೋಮ ಪ್ರಕರಣದ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.
ಜೂ.21 ರ ವರೆಗೆ ಲಾಕ್ಡೌನ್ ವಿಸ್ತರಣೆ:
ಜಿಲ್ಲೆಯಲ್ಲಿ ಜೂ. 14 ರಿಂದ 21ರ ವರೆಗೆ ಸಂಪೂರ್ಣ ಲಾಕ್ಡೌನ್ ಮುಂದುವರೆಸಿ ಜಿಲ್ಲಾಡಳಿತ ಆದೇಶಿಸಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಗತ್ಯ ವಸ್ತುಗಳ ಖರೀದಿಗಾಗಿ 14, 16, ಮತ್ತು 18 ರಂದು ಬೆಳಗ್ಗೆ 6 ರಿಂದ 12 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದ ದಿನ ಹಾಲು, ಮೊಟ್ಟೆ ಹಾಗೂ ಮೆಡಿಕಲ್ಗೆ ಮಾತ್ರ ಸೀಮಿತವಾಗಿದೆ.