ದಾವಣಗೆರೆ: 2023ರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುವ ಮುನ್ನ ರಾಜಕೀಯ ಪಕ್ಷಗಳು ಮತಬೇಟೆ ಆರಂಭಿಸಿವೆ. ಬಿಜೆಪಿಯ ನಾಯಕರು ವಿಜಯ ಸಂಕಲ್ಪ ಯಾತ್ರೆ ಆರಂಬಿಸಿದ್ರೇ, ಇತ್ತಾ ಕೈ ಪಕ್ಷದ ನಾಯಕರು ಪ್ರಜಾಧ್ವನಿ ಯಾತ್ರೆ ಆರಂಭಿಸಿ ಮತಬೇಟೆಯಾಡ್ತಿದ್ದಾರೆ. ಸತತ ನಾಲ್ಕು ದಿನಗಳ ಕಾಲ ದಾವಣಗೆರೆ ಜಿಲ್ಲೆಯಲ್ಲೇ ಸುತ್ತು ಹಾಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಐದು ಮತ ಕ್ಷೇತ್ರಗಳಲ್ಲಿ ತಮ್ಮ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡು ಮತದಾರರನ್ನು ಸೆಳೆದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ಗಳನ್ನು ಮನೆಮನೆಗೆ ಭೇಟಿ ನೀಡಿ ವಿತರಿಸಿದರು.
ರಾಜ್ಯದಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಪಟ್ಟು ಹಿಡಿದಿರುವ ಕೈ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ವಿವಿಧ ಮತ ಕ್ಷೇತ್ರಗಳಿಗೆ ತೆರಳಿ ತಮ್ಮ ಸರ್ಕಾರಗಳ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಸೇಳೆಯುತ್ತಿದ್ದಾರೆ. ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಧ್ವನಿಯಾತ್ರೆಗಳನ್ನು ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಕಾಂಗ್ರೆಸ್ಗೆ ಮತಗಳನ್ನು ನೀಡುವಂತೆ ಸಂದೇಶ ರವಾನೆ ಮಾಡಿದರು.
ಇನ್ನು ಇಂದು ಕೂಡ ತಮ್ಮ ಕಾರ್ಯಕರ್ತರ ದಂಡು ಕಟ್ಟಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲೂ ಸಂಚರಿಸಿ, ಶಾಮನೂರಿನಲ್ಲಿರುವ ಪ್ರತಿಷ್ಠಿತ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಆರ್ಶೀವಾದ ಪಡೆದರು. ಬಳಿಕ ಶಾಮನೂರಿನ ಮನೆ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಮತದಾರರಿಗೆ ಮನವರಿಕೆ ಮಾಡಿದರು.
ಇನ್ನು ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000, ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವ ಗ್ಯಾರೆಂಟಿ ಕಾರ್ಡ್ ಅನ್ನು ಸಿದ್ದರಾಮಯ್ಯನವರು ಮನೆ ಮನೆಗೆ ಭೇಟಿ ನೀಡಿ ಹಂಚಿದರು. ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂದು ಮನೆ ಮನೆಗೆ ಭೇಟಿ ನೀಡಿ ಗ್ಯಾರೆಂಟಿ ಕಾರ್ಡ್ನ್ನು ಹಂಚಿದ್ದೇನೆ, ಉಳಿದಂತೆ ಮಾಜಿ ಸಚಿವ ಮಲ್ಲಿಕಾರ್ಜುನ್ ಅವರು ಹಾಗು ಕಾರ್ಯಕರ್ತರು ಗ್ಯಾರೆಂಟಿ ಕಾರ್ಡ್ನ್ನು ಹಂಚುತ್ತಾರೆ. ಇಲ್ಲಿ ತನಕ ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರಂತೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದರು.
ಸಿದ್ದರಾಮಯ್ಯ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ಅವರ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶಿಸಿದರು. ಇನ್ನು ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದತ್ತ ಮುಖ ಮಾಡದ ಶಾಸಕ ಎಸ್ ಎ ರವೀಂದ್ರನಾಥ್ ಅವರ ವಿರುದ್ಧ ಕೆಲ ಮತದಾರರು ಕೆಲಸ ಮಾಡಿಲ್ಲ ಎಂದು ದೂರಿದರು. ಇದನ್ನೇ ಬಂಡವಾಳ ಮಾಡಿಕೊಂಡ ಸಿದ್ದರಾಮಯ್ಯ ಅವರು ಈ ಬಾರಿ ಮತವನ್ನು ಕಾಂಗ್ರೆಸ್ಗೆ ನೀಡಿ ಎಲ್ಲಾ ಸರಿ ಹೋಗಲಿದೆ ಎಂದರು.
ಸಿದ್ದರಾಮಯ್ಯ ಕಾರ್ಡ್ ಹಂಚುವ ಜೊತೆಯಲ್ಲಿ ಅಲ್ಲಿನ ಬಡ ಮಹಿಳೆಯರ ಸಮಸ್ಯೆಗಳನ್ನು ಕೂಡ ಆಲಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮಾಜಿ ಸಚಿವರಾದ ಎಸ್ಎಸ್ ಮಲ್ಲಿಕಾರ್ಜುನ್, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಸಲೀಂ ಅಹ್ಮದ್ ಸಾಥ್ ನೀಡಿದರು. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಐದು ಮತ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ಸುತ್ತು ಹಾಕಿದೆ. ಇದಕ್ಕೆ ಸುಮ್ಮನೆ ಕೂರದ ಬಿಜೆಪಿ ನಾಯಕರು ಇದೇ 17ಕ್ಕೆ ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕರೆಸಿ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.