ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಸದ್ಯ ಅನುದಾನಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಕೆ ಸದಸ್ಯರ ನಡುವೆ ಕಿತ್ತಾಟ ಆರಂಭವಾಗಿದೆ. ಬಿಜೆಪಿ ಗೆದ್ದಿರುವ ವಾರ್ಡ್ಗಳಲ್ಲಿ ಅನುದಾನ ಮಾತ್ರ ಕೋಟಿಗಟ್ಟಲೆ ನೀಡಲಾಗುತ್ತಿದೆಯಂತೆ. ಉಳಿದ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ಮಾತ್ರ ಅನುದಾನ ನೀಡುತ್ತಿಲ್ಲವಂತೆ. ಇದಲ್ಲದೆ ಕಾಂಗ್ರೆಸ್ ವಾರ್ಡ್ಗಳಲ್ಲಿರುವ ಸಮಸ್ಯೆ ಕೂಡ ಅಲಿಸದೆ ಇರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣ ಆಗಿದೆ.
ಮಹಾನಗರ ಪಾಲಿಕೆಗೆ 15 ನೇ ಹಣಕಾಸು ಯೋಜನೆಯಡಿ 29 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದ್ದು, 45 ವಾರ್ಡ್ಗಳಿಗೆ ಸಮರ್ಪಕ ಅನುದಾನ ನೀಡದೇ ತಾರತಮ್ಯ ಎಸಗಲಾಗಿದೆ. ಕೂಡಲೇ ಮಧ್ಯ ಪ್ರವೇಶಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿ ಪಾಲಿಕೆ ಪ್ರತಿಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
2022-23 ನೇ ಸಾಲಿನಲ್ಲಿ ಅನುದಾನ ಬಂದಿದ್ದರೂ ಇದುವರೆಗೆ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಯರ್ ಆಗಿ ಜಯಮ್ಮ ಗೋಪಿನಾಯ್ಕ್ ಎಂಟು ತಿಂಗಳಾಗುತ್ತ ಬಂದಿದ್ದರೂ 15ನೇ ಹಣಕಾಸು ಯೋಜನೆಯಡಿ ಬಂದಿರುವ ಹಣವನ್ನು ಸರಿಯಾಗಿ ನೀಡದೇ ತಾರತಮ್ಯ ಎಸಗಿದ್ದಾರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.