ದಾವಣಗೆರೆ/ ಮೈಸೂರು: ಪೇಜಾವರ ಶ್ರೀ ನಿಧನದ ಹಿನ್ನೆಲೆ, ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮಿಜಿ, ಯದುವೀರ ಕೃಷ್ಟದತ್ತ ಚಾಮರಾಜ ಒಡೆಯರ್, ಸುತ್ತೂರು ಮಠದ ಪೀಠಾಧಿಪತಿ ಡಾ.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಪೇಜಾವರ ಶ್ರೀ ನಿಧನಕ್ಕೆ ಗಣ್ಯರಿಂದ ಸಂತಾಪ ಪೇಜಾವರ ಶ್ರೀಗಳು ಹಾಗೂ ಕನಕ ಪೀಠದ ಜೊತೆ ಮೊದಲಿನಿಂದಲೂ ಉತ್ತಮ ಸಂಬಂಧ ಇಟ್ಟುಕೊಂಡು ಬಂದಿದ್ದರು, ನಾವೂ ಕೂಡ ಪೂಜ್ಯರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದೆವೆ. ಶ್ರೀಗಳು ಅಖಂಡ ಭಾರತದ ಸಂಸ್ಕೃತಿ, ಧರ್ಮದ ಬಗ್ಗೆ ಹೋರಾಟ ಮಾಡಿಕೊಂಡು ಬಂದವರು. ಅವರ ನಿಧನದಿಂದ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶ್ರೀ ಕೃಷ್ಣ ಚಿರಶಾಂತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.
ಪೇಜಾವರ ಶ್ರೀ ನಿಧನಕ್ಕೆ ಗಣ್ಯರಿಂದ ಸಂತಾಪ ವಿಶ್ವೇಶ್ವರ ತೀರ್ಥ ಶ್ರೀಪಾದರು ದೈವಾದೀನರಾಗಿರುವುದು ಬಹಳ ದುಃಖವಾಗಿದೆ. ಬಾಲ್ಯದಲ್ಲೇ ವೈಯಕ್ತಿಕ ಜೀವನ ತ್ಯಜಿಸಿ 80 ವರ್ಷ ಕೃಷ್ಣನ ಸೇವೆ ಮಾಡಿದ್ದಾರೆ. ಸಮಾಜ ಸುಧಾರಣೆಗೆ ತಮ್ಮ ಜೀವನ ಮುಡುಪಿಟ್ಟಿದ್ದರು. ಶ್ರೀಗಳ ಅಗಲಿಕೆಯ ದುಃಖ ಬರಿಸುವ ಶಕ್ತಿಯನ್ನು ಚಾಮುಂಡೇಶ್ವರಿ ನೀಡಲಿ, ಎಂದು ಪೇಜಾವರ ಸ್ವಾಮೀಜಿ ಮತ್ತು ಜಯಚಾಮರಾಜ ಒಡೆಯರ್ ಇರುವ ಹಳೆಯ ಭಾವಚಿತ್ರ ಶೇರ್ ಮಾಡಿ ರಾಜವಂಶಸ್ಥ ಯದುವೀರ ಕೃಷ್ಟದತ್ತ ಚಾಮರಾಜ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಹಂಚಿಕೊಂಡಿದ್ದಾರೆ.
ಸುತ್ತೂರು ಮಠದ ಪೀಠಾಧಿಪತಿ ಡಾ.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೂಡ ಇದೇ ಸಂದರ್ಭದಲ್ಲಿ ಸಂತಾಪ ಸೂಚಿಸಿದ್ದಾರೆ, ಶಾಖ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಪೇಜಾವರ ಮಠದ ಶ್ರೀ ವಿಶ್ವೇಶ್ವರ ಶ್ರೀ ತೀರ್ಥ ಸ್ವಾಮೀಜಿಗಳು ಯತಿವರ್ಯರಲ್ಲಿ ಸಮಾಜದ ಕಣ್ಣುಗಳಂತೆ. ಈಗ ಪೇಜಾವರ ಶ್ರೀ ಅಗಲಿಗೆ ಸಮಾಜಕ್ಕೆ ಶೂನ್ಯ ಆವರಿಸುವಂತೆ ಮಾಡಿದೆ ಎಂದರು.
ಪೇಜಾವರ ಶ್ರೀಗಳ ತಾತ್ವಿಕ ನಿಲುವು ಏನೇ ಇದ್ದರು. ವ್ಯಕ್ತಿಗಳಿಗೆ ಗೌರವ ಕೊಡುತ್ತಿದ್ದರು. ಸುತ್ತೂರು ಮಠಕ್ಕೂ ಅವರಿಗೂ ಅವಿನಾಭಾವ ಸಂಬಂಧವಿತ್ತು ಎಂದು ನೆನಪು ಮಾಡಿಕೊಂಡರು. ರಾಮಮಂದಿರ ಅವರ ಕನಸಾಗಿತ್ತು ನಿರ್ಮಾಣಕ್ಕೂ ಮುನ್ನ ಸಾವನ್ನಪ್ಪಿರುವುದು ಬೇಸರ ತಂದಿದೆ ಎಂದರು.