ದಾವಣಗೆರೆ: ಮೈಮೇಲೆ ಬೀರೇಶ್ವರ ದೇವರು ಬರುತ್ತದೆ ಎಂದು ಸಾಕಷ್ಟು ಜನರಿಗೆ ವಾಡಿಕೆ ಹೇಳ್ತಾ ಜನರಿಗೆ ಒಳ್ಳೆಯದನ್ನು ಮಾಡುತ್ತಿದ್ದ ವ್ಯಕ್ತಿಗೆ ಖದೀಮರು ಖೆಡ್ಡಾ ತೋಡಿದ್ದಾರೆ. ಅಮಾವಾಸ್ಯೆ ಹುಣ್ಣಿಮೆಗೆ ರಾಜ್ಯಾದ್ಯಂತ ಸಮಸ್ಯೆಗಳನ್ನು ಹೊತ್ತು ತನ್ನತ್ತ ಆಗಮಿಸುವವರಿಗೆ ಮುಳ್ಳಿನ ಗದ್ದುಗೆ ಮೇಲೆ ಕುಳಿತು ವಾಡಿಕೆ ಹೇಳುತ್ತಿದ್ದವ ಕೆಲವೇ ತಿಂಗಳ ಹಿಂದೆ ರಿಯಲ್ ಎಸ್ಟೇಟ್ಗೆ ಕೈ ಹಾಕಿದ್ದೇ ಪ್ರಾಣಕ್ಕೆ ಕಂಟಕವಾಗಿದೆ.
ಕುಮಾರಸ್ವಾಮಿ ಹತ್ಯೆ ಕುರಿತು ಸಂಬಂಧಿಕರು ಮಾತನಾಡಿದರು ಭೀಕರ ಕೊಲೆಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ ಇಂದು ಬೆಚ್ಚಿಬಿದ್ದಿದೆ. ಹೊನ್ನಾಳಿಯ ನ್ಯಾಮತಿ ರಸ್ತೆಯ ಮೆಕ್ಕೆಜೋಳ ಹೊಲದಲ್ಲಿ ಹಂತಕರು ತೋಡಿದ್ದ ಖೆಡ್ಡಾಕ್ಕೆ ಕುಮಾರಸ್ವಾಮಿ (40) ಬಲಿಯಾಗಿದ್ದಾರೆ. ತಮ್ಮ ಮೊಬೈಲ್ನಿಂದ ಕರೆ ಮಾಡದ ಹಂತಕರು ಧೋಬಿ ಅಂಗಡಿಯ ಹುಡುಗನ ಫೋನ್ ಮೂಲಕ ದೂರವಾಣಿ ಕರೆ ಮಾಡಿ ಕರೆಸಿಕೊಂಡು ಕುಮಾರಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಹೊನ್ನಾಳಿ ಪಟ್ಟಣದ ಕೆಂಚದೇವರು ಬೀರಲಿಂಗೇಶ್ವರ ದೇವಾಲಯದ ದೇವರ ಮಗ (ದೇವರು ಮೈಮೇಲೆ ಬರುವವನನ್ನು ಹೀಗೆ ಕರೆಯುತ್ತಾರೆ)ನನ್ನು ಚಾಕುವಿನಿಂದ ಇರಿದು ತಲೆಯ ಭಾಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ. ಬೇರೆಯವರ ಪಾಲಾಗಿದ್ದ ತಾತ ಮುತ್ತಾತನ ಕಾಲದ ಜಮೀನನ್ನು ಕೋರ್ಟ್ ಮೂಲಕ ತಮ್ಮದಾಗಿಸಿಕೊಂಡಿದ್ದ ಕುಮಾರಸ್ವಾಮಿಯ ಪ್ರಾಣಕ್ಕೆ ಕಂಟಕವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
ಶಿವಮೊಗ್ಗದಲ್ಲಿ ಲಕ್ಷಾಂತರ ಹಣ ವ್ಯಯ ಮಾಡಿ ಎರಡು ಎಕರೆಯಲ್ಲಿ ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದರಿಂದ ಹಣದ ವಿಚಾರಕ್ಕೆ ಕುಮಾರಸ್ವಾಮಿಯನ್ನು ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕಳೆದ ದಿನ ಹಂತಕರು ಧೋಬಿ ಹುಡುಗನ ಮೊಬೈಲ್ನಿಂದ ಕರೆ ಮಾಡಿ ಹೊನ್ನಾಳಿಯ ಹಿರೇಕಲ್ಮಠ ವೃತ್ತಕ್ಕೆ ಕರೆಸಿಕೊಂಡಿದ್ದಾರೆ.
ಅಲ್ಲಿಂದ ಹಂತಕರು ನ್ಯಾಮತಿ ರಸ್ತೆಗೆ ಕರೆದುಕೊಂಡು ಹೋಗಿ ಮೆಕ್ಕೆಜೋಳದ ಹೊಲದಲ್ಲಿ ತಲೆ ಭಾಗಕ್ಕೆ ಹೊಡೆದು ಬಳಿಕ ಹೊಟ್ಟೆ ಭಾಗಕ್ಕೆ ಚೂರಿ ಇರಿದು ಕುಮಾರಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ. ಇದು ರಿಯಲ್ ಎಸ್ಟೇಟ್ ಹಾಗೂ ಹಣದ ವ್ಯವಹಾರಕ್ಕಾಗಿಯೇ ಕೊಲೆ ನಡೆದಿದೆ ಎಂಬುದು ಸಂಬಂಧಿಕರ ಆರೋಪವಾಗಿದೆ.
ಒಟ್ಟಾರೆ ವಾಡಿಕೆ ಹೇಳ್ತಾ ಜನರ ಸಮಸ್ಯೆ ಬಗೆಹರಿಸುತ್ತಿದ್ದ ಕುಮಾರಸ್ವಾಮಿ ಕೊಲೆಯಾಗಿದ್ದಾರೆ. ಇದು ಹಣದ ವ್ಯವಹಾರ ಹಾಗು ರಿಯಲ್ ಎಸ್ಟೇಟ್ಗೆ ಕೈ ಹಾಕಿದ್ದರಿಂದ ಕೊಲೆ ಮಾಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ರೆ, ಇನ್ನೂ ಕೆಲವರು ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಕೊಲೆ ನಡೆದಿರಬಹುದು ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಅದೇನೆ ಆಗಲಿ, ಹೊನ್ನಾಳಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆದ ಬಳಿಕವೇ ಸತ್ಯಾಸತ್ಯತೆ ಹೊರಬರಲಿ.
ಓದಿ:ಪುತ್ತೂರಿನಲ್ಲಿ 2 ಪ್ರತ್ಯೇಕ ಗಾಂಜಾ ಪ್ರಕರಣ; ಮೂವರ ಬಂಧನ.. ಗಾಂಜಾ, ಪಿಸ್ತೂಲ್, ಕಾರು ವಶ