ದಾವಣಗೆರೆ: ಕೊರೊನಾಗೆ ಸಂಬಂಧಿಸಿದಂತೆ ಇಲ್ಲೊಂದು ವಿಶೇಷ ಊರ ಹಬ್ಬ ಜರುಗುತ್ತಿದೆ. ತಾಲೂಕಿನ ಕಕ್ಕರಗೋಳ ಗ್ರಾಮದ ಹಬ್ಬದ ಪ್ರಯುಕ್ತ 9 ದಿನಗಳ ಕಾಲ ಇಡೀ ಗ್ರಾಮಕ್ಕೆ ಬೇಲಿ ಹಾಕುತ್ತಾರೆ.
ಈ ವೇಳೆ ಯಾರಾದರು ಒಬ್ಬರು ಬೆಳ್ಳಿ, ಬಂಗಾರ ಹಣ ಬಿಟ್ಟು ಬೇರೇನೇ ವಸ್ತುಗಳನ್ನು ಊರೊಳಗೆ ಒಯ್ದರೆ ಮುಗಿತು. ಅವುಗಳನ್ನು ಊರ ಹೊರಗೆ ತೆಗೆದುಕೊಂಡು ಬರುವಂತಿಲ್ಲ. ಯಾರೊಬ್ಬರು ಸತ್ತರು ಕೂಡ ಊರೊಳಗೆ ಅಂತ್ಯಕ್ರಿಯೆ ಮಾಡುವ ವಿಶಿಷ್ಟ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಕೊರೊನಾ ವೇಳೆ ಗ್ರಾಮದೇವತೆ ಇಡೀ ಗ್ರಾಮವನ್ನು ಲಾಕ್ ಮಾಡಿದ್ದಾಳೆ.
ಕಕ್ಕರಗೋಳ ಗ್ರಾಮದ ಸುತ್ತ 9 ದಿನಗಳ ದಿಗ್ಭಂಧನ ತಾಲೂಕಿನ ಕಕ್ಕರಗೋಳದ ಇಡೀ ಗ್ರಾಮಕ್ಕೆ ಮುಳ್ಳಿನ ಬೇಲಿ ಹಾಕಲಾಗಿದೆ. ಈ ಕಾನೂನು ಜಾರಿ ಮಾಡಿರುವುದು ಊರ ದ್ಯಾಮಮ್ಮ ದೇವಿಯಂತೆ. ಇಲ್ಲಿ ಒಂಬತ್ತು ದಿನಗಳ ಕಾಲ ಮುಳ್ಳಿನ ಬೇಲಿ ಇರುತ್ತದೆ. ಹೀಗಾಗಿ, ಸರ್ಕಾರಿ ಸೇವೆಯಲ್ಲಿ ಇರುವವರು ಹಾಗು ಶಾಲಾ -ಕಾಲೇಜುಗಳಿಗೆ ಹೋಗುವರು ಈ ಒಂಬತ್ತು ದಿನ ಬೇರೆ ಗ್ರಾಮಗಳ ಸಂಬಂಧಿಕರ ಮನೆಗಳಲ್ಲಿ ಇರುತ್ತಾರೆ.
ದ್ಯಾಮಮ್ಮನ ಜಾತ್ರೆ ಅಂದ್ರೆ ಸಾವಿರಾರು ಜನ ಸೇರುತ್ತಾರೆ. ರಥೋತ್ಸವ ಸೇರಿದಂತೆ ಹತ್ತಾರು ಉತ್ಸವ ಮಾಡುತ್ತಾರೆ. ಈಗ ಕೋವಿಡ್ ಸಂಕಷ್ಟದ ಕಾಲದಲ್ಲಿ ದ್ಯಾಮಮ್ಮನ ಸಂಪ್ರದಾಯ ಜನರ ಸಹಾಯಕ್ಕೆ ಬಂದಿದೆ. ಒಂದು ರೀತಿಯಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮ ಸಂಪೂರ್ಣ ಲಾಕ್ಡೌನ್ ಆಗುತ್ತೆ ಅಂದರೆ ತಪ್ಪಾಗಲಿಕ್ಕಿಲ್ಲ.
ಊರಿಗೆ ಮುಳ್ಳಿನ ಬೇಲಿ ಹಾಕಿರುವುದು ಇಂದು ಬೆಳಗ್ಗೆ ಒಂದು ಗಂಟೆಗೆ ಊರ ದ್ಯಾಮಮ್ಮನ ಜಾತೆಗೆ ಚಾಲನೆ ಸಿಕ್ಕಿದೆ. ಒಂಬತ್ತು ದಿನಗಳ ಕಾಲ ನಿರಂತರವಾಗಿ ಗ್ರಾಮದಲ್ಲಿ ಜಾತ್ರೆ ಆದ್ರೆ ಗ್ರಾಮದ ಸುತ್ತಲೂ ಮುಳ್ಳಿನ ಬೇಲಿ ಇರುತ್ತದೆ. ಒಂದು ಸಣ್ಣ ಸೂಜಿ ಸಹ ಇಲ್ಲಿಂದ ಹೊರಗೆ ಹೋದ ಇತಿಹಾಸವಿಲ್ಲ. ಹೀಗೆ ಹೊರ ಹೋದ್ರೆ, ಅವರಿಗೆ ಆಪತ್ತು ಆಗುತ್ತದೆ ಎಂಬುದು ದೇವಿಯ ನಿಯಮ.
ಈ ಹಿಂದೆ ಕೆಲವರಿಗೆ ಸಂಕಷ್ಟ ಬಂದಿದ್ದು ಉಂಟು. ಇನ್ನೊಂದು ಉಗ್ರ ನಿಯಮ ಸಹ ಇಲ್ಲಿ ಜೀವಂತವಿದೆ. ಈ ಒಂಬತ್ತು ದಿನಗಳ ಅವಧಿಯಲ್ಲಿ ಯಾರೇ ಸಾವನ್ನಪ್ಪಿದರೂ ಸಹ ಶವವನ್ನ ಸ್ಮಶಾನಕ್ಕೂ ತೆಗೆದುಕೊಂಡು ಹೋಗುವಂತಿಲ್ಲ. ಗ್ರಾಮದಲ್ಲಿಯೇ ಶವಸಂಸ್ಕಾರ ಮಾಡಬೇಕು. ಈಗಾಗಲೇ ಇಂತಹ ಸಾಕಷ್ಟು ಉದಾಹರಣೆಗಳು ನಡೆದಿವೆ.
ಸರ್ಕಾರ ಪೊಲೀಸ್ ಭದ್ರತೆ ಜೊತೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಮಾಡಿದ್ರು ಸಹ ಜನ ಬೀದಿಯಲ್ಲಿ ಸುತ್ತುವುದನ್ನ ಬಿಡಲ್ಲ. ಆದರೆ, ಕಕ್ಕರಗೋಳ ಗ್ರಾಮದಲ್ಲಿ ಮಾತ್ರ ದೇವಿ ಜಾತ್ರೆ ಬಂದ್ರೆ ಸಾಕು ಶತಮಾನಗಳಿಂದ ಲಾಕ್ಡೌನ್ ಆಗುತ್ತಿದೆ. ಗ್ರಾಮಕ್ಕೆ ಇಂದಿನಿಂದ ಕೆಲವರು ಬರುವ ಸಂಪ್ರದಾಯವಿದೆ. ಬಂದವರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಸಹ ನಡೆಯುತ್ತಿದೆ. ಕೋವಿಡ್ ಅಬ್ಬರದಲ್ಲಿ ಬಂದ ಊರ ದ್ಯಾಮಮ್ಮನ ಜಾತ್ರೆ ಕೋವಿಡ್ ನಿಯಮ ಪಾಲನೆಗೆ ಹೇಳಿ ಮಾಡಿಸಿದ ಜಾತ್ರೆ ಆಗಿದೆ.
ಓದಿ:ಕೊರೊನಾ ಕುರಿತು ಜಾಗೃತಿಯಿಂದ ಇರಬೇಕು : ಸಚಿವ ಕೆ. ಎಸ್ ಈಶ್ವರಪ್ಪ