ದಾವಣಗೆರೆ: ಸ್ತ್ರೀ ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ನೂರಾರು ವರ್ಷಗಳಿಂದ ದೇಶದ ಅಭಿವೃದ್ಧಿಗಾಗಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಮಹಿಳಾ ಸಂಘದ ಗೌರವ ಅಧ್ಯಕ್ಷೆ ರಮಾದೇವಿ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಹರಿಹರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಾರಂಭೋತ್ಸವ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ 186 ನೇ ಜನ್ಮ ದಿನವನ್ನ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ನಾಣ್ಯದ ಎರಡು ಮುಖಗಳಂತಿರುವ ಸ್ತ್ರೀ ಪುರುಷರಿಬ್ಬರೂ ಕೊಡುಗೆ ನೀಡಬೇಕು. ಅನೇಕ ವರ್ಷಗಳಿಂದ ಸ್ತ್ರೀ ಸಮಾನತೆಗಾಗಿ ಹೋರಾಟಗಳು ನಡೆಯುತ್ತಿದ್ದು, ಸ್ತ್ರೀ ಸಮಾನತೆ ಮಹಿಳೆಗೆ ದೊರೆತಾಗ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ ಎಂದರು.