ಹರಿಹರ: ದಾನಿಗಳು ಸಹಕಾರ ನೀಡಿದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಅಬಿವೃದ್ಧಿ ಸಾಧಿಸಲು ಸಾಧ್ಯ ಎಂದು ದಾವಣಗೆರೆ ರೋಟರಿ ಕ್ಲಬ್ ಹಿರಿಯ ಸದಸ್ಯ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವೈದೇಹಿ ನಾರಾಯಣಸ್ವಾಮಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉಚಿತ ಬೆಲ್ಟ್, ಟೈ, ಬ್ಯಾಡ್ಜ್ ವಿತರಿಸಿ ಮಾತನಾಡಿದ ಅವರು, ಶಾಲೆಯ ಭೌತಿಕ ಕಟ್ಟಡ, ಸೌಲಭ್ಯಗಳು ಜನರ ಮನಸ್ಸನ್ನು ಸೆಳೆಯುತ್ತವೆ ಎಂದರು.
ಈಗಿನ ಸರ್ಕಾರಿ ಶಾಲೆಗಳು ಸೌಲಭ್ಯ ಪೂರ್ಣವಾಗುತ್ತಿವೆ. ಇದರ ಜೊತೆಗೆ ದಾನಿಗಳು ಸಹಕಾರ ನೀಡಿದರೆ ಪರಿಪೂರ್ಣತೆ ಹೊಂದುತ್ತವೆ. ಆರ್ಥಿಕ ಶಕ್ತಿ ಇರುವವರು, ಹಳೆಯ ವಿದ್ಯಾರ್ಥಿ, ಉದ್ಯಮಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕು. ರೋಟರಿ ಸಂಸ್ಥೆಯಿಂದ ಆರಂಭಿಸಿದ ಪೊಲಿಯೋ ಲಸಿಕೆ ಕಾರ್ಯಕ್ರಮ ಇಂದು ದೊಡ್ಡ ಅಭಿಯಾನವಾಗಿ ಬೆಳೆದಿದ್ದು, ಭಾರತ ಪೊಲಿಯೋ ಮುಕ್ತವಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ಮಾರಕವಾದ ಈ ಕಾಯಿಲೆ ಜೀವಂತವಾಗಿದೆ. ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ, ಜೀವನ ಕೌಶಲ್ಯಗಳನ್ನು ಕಲಿಸಲು ಶಿಕ್ಷಕರು ಆದ್ಯತೆ ನೀಡಬೇಕೆಂದರು.