ಶ್ಯಾವಿಗೆ ತಯಾರಕಾ ಗಣೇಶ್ ಅವರು ಮಾತನಾಡಿದರು ದಾವಣಗೆರೆ :ದಾವಣಗೆರೆ ಬೆಣ್ಣೆ ದೋಸೆಯಿಂದಲೇ ಫೇಮಸ್ ಆಗಿರುವ ನಗರ. ಇದರ ಜೊತೆಗೆ ಇಲ್ಲಿ ದೊರೆಯುವ ಶ್ಯಾವಿಗೆ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಯುಗಾದಿ ಆಚರಣೆಗೆ ಶ್ಯಾವಿಗೆ ಇಲ್ಲ ಅಂದ್ರೆ ಹಬ್ಬ ಮಾಡಿದಂತೆಯೇ ಆಗುವುದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಶ್ಯಾವಿಗೆ ಫೇಮಸ್ ಆಗಿದೆ. ಅಲ್ಲದೆ ದೇಶ ವಿದೇಶಗಳಲ್ಲಿ ಕೂಡ ಇಲ್ಲಿನ ಶ್ಯಾವಿಗೆಗೆ ಡಿಮ್ಯಾಂಡ್ ಇದೆ. ಮಹಿಳೆಯರಿಗೆ ಆರ್ಥಿಕವಾಗಿ ಸದೃಢರಾಗಲು ಸ್ವಯಂ ಉದ್ಯೋಗ ಒದಗಿಸಿಕೊಟ್ಟಿದ್ದು ಕೂಡ ಇದೇ ಶ್ಯಾವಿಗೆ ಎಂಬುದು ವಿಶೇಷ.
ನಾಗಪ್ಪರ ಶ್ಯಾವಿಗೆ ಅಂಗಡಿಗೆ ದಶಕಗಳ ಇತಿಹಾಸ:ಭಾರತೀಯರ ಹೊಸ ವರ್ಷ ಯುಗಾದಿ ಬಂತೆಂದರೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬೆಣ್ಣೆ ಸುವಾಸನೆಗಿಂತ ಶ್ಯಾವಿಗೆಯ ಘಮಘಮ ಹೆಚ್ಚಾಗಿ ಹರಡುತ್ತದೆ. ಇಲ್ಲಿನ ಕೆಟಿಜೆ ನಗರದ 17ನೇ ಕ್ರಾಸ್ನಲ್ಲಿರುವ ಶ್ಯಾವಿಗೆ ನಾಗಪ್ಪರ ಶ್ಯಾವಿಗೆ ಅಂಗಡಿಗೆ ದಶಕಗಳ ಇತಿಹಾಸ ಇದೆ. ನಾಗಪ್ಪನವರ ಅಕಾಲಿಕ ನಿಧನದ ಬಳಿಕ ಅವರ ಪುತ್ರ ಗಣೇಶ ಅವರು ಈ ಉದ್ಯಮವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಇಲ್ಲಿ ತಯಾರಾಗುವ ಶ್ಯಾವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗಿದೆ. ಇಲ್ಲಿ ಹತ್ತಾರು ಶ್ಯಾವಿಗೆ ತಯಾರಿಕಾ ಘಟಕಗಳಿದ್ರು. ಶ್ಯಾವಿಗೆ ನಾಗಪ್ಪರ ಪುತ್ರ ಗಣೇಶ್ ಅವರ ಬಳಿ ದೊರೆಯುವ ಶ್ಯಾವಿಗೆ ಖ್ಯಾತಿ ಪಡೆದಿದೆ. ಇನ್ನು ದಾವಣಗೆರೆಯಲ್ಲಿ ಯುಗಾದಿ ಅಂದ್ರೆ ಬೇವು-ಬೆಲ್ಲದ ಜೊತೆ ಶ್ಯಾವಿಗೆ ಬಸಿದು(ಬಿಸಿ ನೀರನ್ನು ತೆಗೆದು) ತಿನ್ನುವುದು.
ವಿವಿಧ ಗುಣಮಟ್ಟದಲ್ಲಿ ಶ್ಯಾವಿಗೆ ಸಿದ್ಧ:ಹೊಸ ವರ್ಷದ ಮೊದಲ ದಿನ ಸುಖದ ಸಂಕೇತವಾದ ಬೆಲ್ಲ, ಕಷ್ಟದ ಸಂಕೇತವಾದ ಬೇವು ಸ್ವೀಕರಿಸುವುದು ವಿಶೇಷ. ಇನ್ನೊಂದು ವಿಶೇಷ ಅಂದ್ರೆ ಬಹುತೇಕರ ಮನೆಯಲ್ಲಿ ಶ್ಯಾವಿಗೆ ಬಸಿದು, ಸಕ್ಕರೆ, ಹಾಲು ತುಪ್ಪದೊಂದಿಗೆ ಬೇವು-ಬೆಲ್ಲ ಸ್ವೀಕರಿಸುತ್ತಾರೆ. ಹಾಗಾಗಿ ಶ್ಯಾವಿಗೆ ತಯಾರಿಕಾ ಘಟಕಗಳು ಚುರುಕುಗೊಂಡಿವೆ. ವಿವಿಧ ಗುಣಮಟ್ಟದಲ್ಲಿ ಈಗಾಗಲೇ ಶ್ಯಾವಿಗೆ ಸಿದ್ಧಗೊಂಡಿದೆ. ಶ್ಯಾವಿಗೆ ತಯಾರಿಸಿ ಬಿಸಿಲಿಗೆ ಒಣಗಲು ಹಾಕಿರುವುದು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ.
ವಿದೇಶಕ್ಕೂ ಕೊರಿಯರ್ ಮೂಲಕ ಶ್ಯಾವಿಗೆ ರವಾನೆ: ಇದೇ ವೇಳೆ ಮಾತನಾಡಿದ ಶ್ಯಾವಿಗೆ ತಯಾರಕರಾದ ಗಣೇಶ್ ಅವರು, ನಾವು ತಯಾರು ಮಾಡುವ ಶ್ಯಾವಿಗೆಗೆ ದೇಶ ವಿದೇಶಗಳಲ್ಲಿ ಸಖತ್ ಬೇಡಿಕೆ ಹೆಚ್ಚಿದ್ದು, ಇಲ್ಲಿಂದಲೇ ಅಮೆರಿಕ, ಆಸ್ಟ್ರೇಲಿಯಾ ದೇಶದಲ್ಲಿ ನೆಲೆಸಿರುವವರಿಗೆ ಅವರ ಪೋಷಕರು ತಮ್ಮ ಬಳಿ ದೊರೆಯುವ ಶ್ಯಾವಿಗೆಯನ್ನೇ ಕೊರಿಯರ್ ಮಾಡಿ ಯುಗಾದಿಗೆ ಕಳಿಸುತ್ತಾರೆ. ಕಳೆದ ಬಾರಿ ಕೋವಿಡ್ ಇರುವ ಕಾರಣ ಕಡಿಮೆ ಮಟ್ಟದಲ್ಲಿ ಶ್ಯಾವಿಗೆ ಮಾರಾಟ ಆಗಿತ್ತು. ಈ ಬಾರಿ ನಾವು ಮಾಡಿದ ಶ್ಯಾವಿಗೆಯೆಲ್ಲಾ ಖಾಲಿಯಾಗಿದ್ದು, ಚೆನ್ನಾಗಿ ಮಾರಾಟ ಆಗಿದೆ ಎಂದರು.
ಕೆಜಿ ಶ್ಯಾವಿಗೆಗೆ 65 ರೂ ನಿಗದಿ:ಇನ್ನು, ಗಣೇಶ್ ಅವರ ತಂದೆ ನಾಗಪ್ಪನವರು ಶ್ಯಾವಿಗೆ ತಯಾರಿಸುವುದನ್ನು ಆರು ದಶಕಗಳಿಂದ ಪರಂಪರಾಗತವಾಗಿ ವೃತ್ತಿ ಮಾಡಿಕೊಂಡಿದ್ದಾರೆ. ವರ್ಷದ ನಾಲ್ಕೈದು ತಿಂಗಳು ಮಾತ್ರ ತಯಾರಿಸಲಾಗುತ್ತದೆ. ಆಗ ತಯಾರಿಸಿಕೊಂಡು ಶ್ಯಾವಿಗೆಯನ್ನು ವಿವಿಧ ಜಿಲ್ಲೆ, ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ. ರಾಗಿ, ಗೋಧಿ, ಅಕ್ಕಿ, ಚಿರೋಟಿ ರವೆಯಲ್ಲಿ ತಯಾರಿಸಿದ ಶ್ಯಾವಿಗೆ ಕೆಜಿಗೆ 65 ರೂಪಾಯಿ ರೂಪಾಯಿ ಬೆಲೆ ಇದೆ. ಯುಗಾದಿ ಹಬ್ಬದ ವೇಳೆ ಮೂರರಿಂದ ನಾಲ್ಕು ಕ್ವಿಂಟಾಲ್ ಶ್ಯಾವಿಗೆ ತಯಾರಿಸಲಾಗುತ್ತದೆ.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಶ್ಯಾವಿಗೆಗೆ ಸಹಾಯಕ: ಉಳಿದಂತೆ ಪ್ರತಿನಿತ್ಯ ಒಂದು ಕ್ವಿಂಟಾಲ್ ಶ್ಯಾವಿಗೆ ತಯಾರಿಸಲಾಗುತ್ತದೆ. ಶ್ಯಾವಿಗೆ ತಯಾರಿಕೆಯನ್ನೇ ನಂಬಿಕೊಂಡು ಹತ್ತಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಈ ವೇಳೆ ಮಾತನಾಡಿದ ಗಣೇಶ್ ಅವರ ಪತ್ನಿ ಯಶೋಧ ಅವರು, ಅದರಲ್ಲೂ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಈ ವ್ಯಾಪಾರ ಕೈಹಿಡಿದಿದೆ. ಅಲ್ಲದೆ ಶ್ಯಾವಿಗೆ ತಯಾರು ಮಾಡಿ ನಮ್ಮ ಮನೆಯ ಹೆಣ್ಣುಮಕ್ಕಳೇ ಮನೆ ಮನೆ ಹೋಗಿ ಶ್ಯಾವಿಗೆ ಹೋಮ್ ಡೆಲಿವರಿ ಕೊಟ್ಟು ಬರ್ತಾರೆ. ಇದರಿಂದಲೇ ನಮ್ಮ ದುಡಿಮೆ ನಡೆಯುತ್ತಿದ್ದು, ಶ್ಯಾವಿಗೆ ತಯಾರು ಮಾಡ್ತಾ ಮಾಡ್ತಾ ಯುಗಾದಿ ಹಬ್ಬ ಆಚರಿಸುವುದನ್ನೇ ಮರೆತಿದ್ದೇವೆ ಎಂದರು.
ಒಟ್ಟಾರೆ, ದಾವಣಗೆರೆ ಮಂದಿ ಯುಗಾದಿ ವೇಳೆ ಶ್ಯಾವಿಗೆ ಬಸಿದು ಬೇವು ಬೆಲ್ಲ ತಿನ್ನುವುದರ ಜೊತೆಗೆ ಅದ್ಧೂರಿಯಿಂದ ಯುಗಾದಿ ಹಬ್ಬ ಆಚರಿಸೋದೇ ಒಂದು ಖುಷಿ. ಅಲ್ಲದೆ ಇದೇ ಶ್ಯಾವಿಗೆಯನ್ನು ನಂಬಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿರುವುದು ಅವರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ.
ಇದನ್ನೂ ಓದಿ :ಮರಳಿ ಬಂತು ಯುಗಾದಿ! ಶೋಭಕೃತ್ ಸಂವತ್ಸರ ಸಂಭ್ರಮ