ದಾವಣಗೆರೆ : ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಎರಡು ಗಂಟೆಯಲ್ಲೇ ಗಂಡು ಶಿಶು ನಾಪತ್ತೆಯಾಗಿರುವ ಘಟನೆ ನಡೆದಿದೆ. ಇದರಿಂದ ಸಿಬ್ಬಂದಿ ಕಂಗಾಲಾಗಿದ್ದಾರೆ. ಇತ್ತ ಮಗು ಬೇಕೆಬೇಕು ಎಂದು ಪೋಷಕರು ಪಟ್ಟು ಹಿಡಿದು ಮಹಿಳಾ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದಾರೆ.
ದಾವಣಗೆರೆಯಲ್ಲಿ ಗಂಡು ಶಿಶು ನಾಪತ್ತೆ ಪ್ರಕರಣ : ಆಸ್ಪತ್ರೆಯ ಅಧೀಕ್ಷಕರ ಮಾಹಿತಿ ಹೀಗಿದೆ..
ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಎರಡು ಗಂಟೆಯಲ್ಲೇ ಗಂಡು ಶಿಶು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಅಧೀಕ್ಷಕರಾದ ಡಾ. ನೀಲಕಂಠ ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಆಸ್ಪತ್ರೆಯ ಅಧೀಕ್ಷಕ ಡಾ. ನೀಲಕಂಠ ಮಾತನಾಡಿದ್ದು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಉಮೇಸಲ್ಮಾ, ಹಾಗು ಇಸ್ಮಾಯಿಲ್ ಜಬೀವುಲ್ಲಾ ಅವರಿಗೆ ಸಿಜೇರಿಯನ್ ಹೆರಿಗೆ ಮಾಡಿಸಿ ಮಗು ಹೊರ ತೆಗೆಯಾಲಾಗಿತ್ತು. ಮಗುವಿನ ತೂಕ ಕಡಿಮೆ ಇರುವುದರಿಂದ ಹಾಗು ಉಸಿರಾಟದ ಏರೀಳಿತ ಆಗಿದ್ದರಿಂದ ನವಜಾತ ಶಿಶುವನ್ನು ಮಕ್ಕಳ ನಿಗಾ ಘಟಕಕ್ಕೆ ನೀಡಲಾಗಿತ್ತು. ಎರಡು ಗಂಟೆಗಳ ಕಾಲ ಶಿಶುವಿಗೆ ಚಿಕಿತ್ಸೆ ಬಳಿಕ ಅದನ್ನು ತಾಯಿಗೆ ಕೊಡಬಹುದು ಎಂದು ವೈದ್ಯರು ತಿಳಿಸಿದ್ದರು.
ಆಗ ಮಕ್ಕಳ ತೀವ್ರ ನಿಗಾ ಘಟಕದ ಬಳಿ ಆಸ್ಪತ್ರೆಯ ಸಿಬ್ಬಂದಿ ಇಲ್ಲಿ ಉಮೇಸಲ್ಮಾ ಕಡೆಯವರು ಯಾರು ಎಂದು ಕೇಳಿದಾಗ, ಅಲ್ಲೇ ಇದ್ದ ಓರ್ವ ಅಪರಿಚಿತ ಮಹಿಳೆ ತಾನೇ ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ಶುಶ್ರೂಷಕರು ತಾಯಿ ಕಾರ್ಡ್ ಕೇಳಿದ್ದಾರೆ. ತಾಯಿ ಕಾರ್ಡ್ ಕೆಳಗಿದೆ ಎಂದು ಅಪರಿಚಿತ ಮಹಿಳೆ ಶಿಶುವನ್ನು ಪಡೆದು ಪರಾರಿಯಾಗಿದ್ದಾಳೆ. ಈಗಾಗಲೇ ಸಿಸಿಟಿವಿ ವಿಡಿಯೋ ಪರಿಶೀಲಿಸಲಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದರು.