ದಾವಣಗೆರೆ:ನಗರದ ಹಳೇ ಕುಂದುವಾಡದಲ್ಲಿ ಕಲುಷಿತ ನೀರು ಸೇವಿಸಿ ಹಾಗೂ ಅನೈರ್ಮಲ್ಯ ಕಾರಣ 500ಕ್ಕೂ ಹೆಚ್ಚು ಜನರು ಡೆಂಘಿ ಜ್ವರದ ಭೀತಿಯಲ್ಲಿದ್ದರು. ಇದೀಗ ಮಾಧ್ಯಮಗಳ ವರದಿಯಿಂದ ನಂತರ ಎಚ್ಚೆತ್ತ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ.
ನಗರದ 30ನೇ ವಾರ್ಡ್ ವ್ಯಾಪ್ತಿಯ ಹಳೇ ಕುಂದುವಾಡ ಹೆಸರಿಗೆ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಸೇರಿದೆ. ಆದರೆ ಇಲ್ಲಿರುವ ಜನರಿಗೆ ಯಾವುದೇ ಸ್ಮಾರ್ಟ್ ಸೌಲಭ್ಯಗಳು ಸಿಗುತ್ತಿಲ್ಲ. ಕನಿಷ್ಠ ಶುದ್ಧವಾದ ಕುಡಿಯುವ ನೀರೂ ಕೂಡ ಸಿಕ್ಕಿಲ್ಲ. ಕುಂದುವಾಡವು ಸುಮಾರು 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಹಾಗೂ ನಗರ ಮಿಶ್ರಿತ ಸೊಗಡು ಇರುವ ಪ್ರದೇಶ. ಇಲ್ಲಿ ಕಳೆದ ಒಂದು ತಿಂಗಳಿಂದ ಸುಮಾರು 500 ಮಂದಿ ಜ್ವರದಿಂದ ಬಳಲಿ ಹಾಸಿಗೆ ಹಿಡಿದಿದ್ದಾರೆ. ಇದರಲ್ಲಿ ಬಹುತೇಕರಿಗೆ ಶಂಕಿತ ಡೆಂಘಿ ಅಟ್ಯಾಕ್ ಆಗಿದೆ ಎಂದು ಹೇಳಲಾಗಿದೆ.
ಗ್ರಾಮದಲ್ಲಿ ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮನೆಗೆ ಇಬ್ಬರಿಂದ ಮೂವರು ಜ್ವರದಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸ್ವಚ್ಚತೆಯ ಕೊರತೆ ಹಾಗೂ ಕುಂದುವಾಡ ಕೆರೆ ನೀರನ್ನು ಶುದ್ದೀಕರಿಸದಿರುವುದು ಎಂಬುದು ಇಲ್ಲಿನ ಜನರ ಆರೋಪವಾಗಿದೆ.