ದಾವಣಗೆರೆ: ಬೆಣ್ಣೆದೋಸೆ ಅಂದ್ರೆ ತಕ್ಷಣ ನೆನಪಾಗೋದು ದಾವಣಗೆರೆ. ಇಲ್ಲಿನ ಗರಿಗರಿಯಾದ ಬಿಸಿಬಿಸಿ ದೋಸೆಯ ರುಚಿಗೆ ಮನಸೋಲದವರೇ ಇಲ್ಲ. ರಾಜಕಾರಣಿಗಳಿಂದ ಹಿಡಿದು ಸಿನಿಮಾ ನಟರ ತನಕ ಅತಿ ಹೆಚ್ಚಿನ ಜನರಿಗೆ ಬೆಣ್ಣೆದೋಸೆ ಅಂದ್ರೆ ಪಂಚಪ್ರಾಣ. ದಾವಣಗೆರೆಯತ್ತ ಯಾರಾದರೂ ಬಂದ್ರೆ ಬೆಣ್ಣೆದೋಸೆಯ ರುಚಿ ಸವಿಯದೇ ಹೋಗೋದು ತುಂಬಾ ಕಡಿಮೆ.
ನಗರದ ಗುಂಡಿ ವೃತ್ತದಲ್ಲಿರುವ ಹಳೇ ಸಾಗರ್ ಮತ್ತು ಕೊಟ್ಟೂರೇಶ್ವರ ಹೋಟೆಲ್ನಲ್ಲಿ ಸಿಗೋ ಬೆಣ್ಣೆದೋಸೆ ತುಂಬಾ ಸ್ಪೆಷಲ್ ನೋಡಿ. ಹಾಗಾಗಿಯೇ, ಇಲ್ಲಿನ ಬೆಣ್ಣೆದೋಸೆ ಮತ್ತು ಖಾಲಿ ದೋಸೆ ಸವಿಯಲು ರಾಜಕಾರಣಿಗಳು, ಸಿನಿಮಾ ನಟರು ಸೇರಿದಂತೆ ವಿವಿಧೆಡೆಯಿಂದ ಜನ ಆಗಮಿಸ್ತಾರೆ. ಒಂದು ದಿನಕ್ಕೆ ಬೆಣ್ಣೆ ದೋಸೆಯನ್ನು ತಯಾರಿಸಲು ಎಷ್ಟು ಹಿಟ್ಟು, ಬೆಣ್ಣೆ ಖರ್ಚಾಗುತ್ತೇ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
250 ರಿಂದ 300 ಗ್ರಾಹಕರು:ಗುಂಡಿ ವೃತ್ತದಲ್ಲಿರುವ ಕೊಟ್ಟೂರೇಶ್ವರ ಮತ್ತು ಹಳೇ ಸಾಗರ್ ಹೋಟೆಲ್ನ ಬೆಣ್ಣೆ ದೋಸೆ ಹಾಗೂ ಖಾಲಿ ದೋಸೆ ಸವಿಯಲು ಮಹಾರಾಷ್ಟ್ರ, ಆಂಧ್ರ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಜನ ಆಗಮಿಸ್ತಾರೆ. ದಿನನಿತ್ಯ ಕನಿಷ್ಠ ಅಂದ್ರೂ 250 ರಿಂದ 300 ಮಂದಿ ಒಂದು ಹೋಟೆಲ್ನಲ್ಲಿ ಬೆಣ್ಣೆ ದೋಸೆ ಸವಿಯುತ್ತಾರೆ.
ಅಕ್ಕಿ ಹಿಟ್ಟು, ಬೆಣ್ಣೆ ಖರ್ಚು: ದಾವಣಗೆರೆ ನಗರದ ಪ್ರಮುಖ ಐದಾರೂ ಬೆಣ್ಣೆ ದೋಸೆ ಹೋಟೆಲ್ಗಳ ಪೈಕಿ ಒಂದು ಹೋಟೆಲ್ನಲ್ಲಿ ಒಂದು ದಿನಕ್ಕೆ ಬೆಣ್ಣೆ ದೋಸೆ ತಯಾರು ಮಾಡಲು ಕನಿಷ್ಠ ಅಂದ್ರೂ 40 ಕೆಜಿ ಅಕ್ಕಿ ಹಿಟ್ಟು ಬೇಕಾಗುತ್ತದೆ. ಶನಿವಾರ, ಭಾನುವಾರ ವಿಶೇಷವಾಗಿ ದೋಸೆ ಮಾಡುವುದರಿಂದ 50 ರಿಂದ 60 ಕೆಜಿ ಅಕ್ಕಿ ಹಿಟ್ಟು ದೋಸೆ ತಯಾರಿಸಲು ಖರ್ಚಾಗುತ್ತದೆ. ದೋಸೆ ಗರಿಗರಿಯಾಗಿ ಬರಲು ಹಾಗೂ ರುಚಿ ಹೆಚ್ಚಾಗಿರಲು ಬೆಣ್ಣೆ ಅತ್ಯವಶ್ಯಕವಾಗಿರುತ್ತದೆ. ಇದರಿಂದ ಒಂದು ಹೋಟೆಲ್ನಲ್ಲಿ ಒಂದು ದಿನಕ್ಕೆ ಹತ್ತು ಕೆಜಿ ಬೆಣ್ಣೆ ಖರ್ಚಾಗುತ್ತದೆ. ದೋಸೆಗೆ ಬಳಸುವ ಬೆಣ್ಣೆ ಮಾತ್ರ ಮಹಾರಾಷ್ಟ್ರದಿಂದ ತರಿಸಿಲಾಗುತ್ತದೆ. ಒಂದು ದಿನಕ್ಕೆ ಸರಿಸುಮಾರು 300 ಗ್ರಾಹಕರು ಬೆಣ್ಣೆ ದೋಸೆ ಸವಿಯುವುದು ಪಕ್ಕಾ ಎನ್ನುತ್ತಾರೆ ಹಳೇ ಸಾಗರ್ ಬೆಣ್ಣೆ ದೋಸೆ ಹೋಟೆಲ್ ಮಾಲೀಕ ವಿಜಯ್ ಕುಮಾರ್.
ಒಂದು ತಿಂಗಳ ಲೆಕ್ಕಚಾರ:ಒಂದು ತಿಂಗಳ ಲೆಕ್ಕಚಾರ ನೋಡಿದ್ರೆ ಒಂದು ಹೋಟೆಲ್ಗೆ 1,200 ಕೆ.ಜಿ ದೋಸೆ ಹಿಟ್ಟು, 300 ರಿಂದ 350 ಕೆ.ಜಿ ಬೆಣ್ಣೆ ಹಾಗು ಅಡುಗೆ ಎಣ್ಣೆ 150 ಲೀಟರ್ ಬೇಕಾಗುತ್ತದೆ. ಇನ್ನು ಒಂದು ತಿಂಗಳಿಗೆ ಒಂದು ಹೋಟೆಲ್ಗೆ ಭೇಟಿ ನೀಡುವವರ ಸಂಖ್ಯೆ 9,000 ಆದರೆ ಐದಾರು ಹೋಟೆಲ್ಗಳಿಗೆ ಭೇಟಿ ನೀಡುವ ಒಟ್ಟು ಗ್ರಾಹಕರ ಸಂಖ್ಯೆ 54,000.
30 ವರ್ಷ ಹಳೇ ಹೋಟೆಲ್:ಕೊಟ್ಟೂರೇಶ್ವರ ಹೋಟೆಲ್ ಒಟ್ಟು ನಾಲ್ಕೈದು ಹೋಟೆಲ್ಗಳು ಸತತವಾಗಿ 30 ವರ್ಷಗಳಿಂದ ನಡೆಸಲಾಗುತ್ತಿದೆ. ಇನ್ನು ಹಳೇ ಸಾಗರ್ ಬೆಣ್ಣೆ ದೋಸೆ ಹೋಟೆಲ್ ಕೂಡ ಸುಮಾರು 28 ವರ್ಷಗಳಿಂದ ಇದ್ದು, ನಮ್ಮ ಹೋಟೆಲ್ ಬೆಣ್ಣೆದೋಸೆಯ ರುಚಿ ಸವಿಯಲು ವಿವಿಧೆಡೆಗಳಿಂದ ಜನರು ಬರುತ್ತಾರೆ. ಅದರಲ್ಲೂ ವೀಕೆಂಡ್ನಲ್ಲಿ ಬೆಣ್ಣೆದೋಸೆಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಮಾಲೀಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಪುಟ್ಟ ಗುಡಿಸಲಿಂದ ವಿದೇಶ ತಲುಪಿದ ಗೋಕಾಕ್ ಕರದಂಟು ಸ್ವಾದ..!