ಹರಿಹರ :ತುಂಗಭದ್ರಾ ನದಿ ಸ್ವಚ್ಛತಾ ಅಭಿಯಾನಕ್ಕೆ ಹೆಚ್ಚು ಜನರು ಕೈ ಜೋಡಿಸಲಿ, ನಿಮ್ಮ ಜೊತೆಯಲ್ಲಿ ಜಿಲ್ಲಾಡಳಿತ ಸಹ ಸಹಕಾರವನ್ನು ನೀಡಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶ್ಲಾಘಿಸಿದರು.
ತುಂಗಭದ್ರಾ ನದಿ ಸ್ವಚ್ಛತಾ ಕಾರ್ಯಕ್ಕೆ ಸಾಥ್ ನೀಡಿದ ಜಿಲ್ಲಾಧಿಕಾರಿ ನಗರದ ತುಂಗಭದ್ರಾ ನದಿ ತಟದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಕಾರ್ಯಕ್ರಮದಿಂದ ಪ್ರತಿಯೊಬ್ಬ ನಾಗರಿಕರಿಗೆ ತಮ್ಮ ಹೊಣೆ ಏನು ಎಂಬುವುದನ್ನು ಅರಿವಿಗೆ ಬರಲಿದೆ. ಇಂತಹ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸಿದ ಜನಪ್ರತಿನಿಧಿಗಳು, ಯುವಕರು, ತಾಯಂದಿರು, ಹಿರಿಯರು, ಮಕ್ಕಳು ಎಲ್ಲರಿಗೂ ಅಭಿನಂದಿಸಿದರಲ್ಲದೆ ಮುಂದಿನ ದಿನಗಳಲ್ಲಿ ಈ ಅಭಿಯಾನಕ್ಕೆ ಇದಕ್ಕಿಂತಲೂ ಹತ್ತುಪಟ್ಟು ಜನರು ಕೈಜೋಡಿಸುವಂತಾಗಲಿ, ಈ ಕಾರ್ಯಕ್ಕೆ ಜಿಲ್ಲಾಡಳಿತವು ಸಹಕಾರ ನೀಡಲಿದೆ ಎಂದು ಶುಭಹಾರೈಸಿದರು.
ಶಾಬಳಿಕ ಸಕ ಎಸ್. ರಾಮಪ್ಪ ಮಾತನಾಡಿ, ನದಿ ದಡದಲ್ಲಿ ಇಲ್ಲಿಗೆ ಬಂದು ಇಂತಹ ಮಹತ್ತರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಸಂತೋಷ ತಂದಿದೆ. ನದಿ ಸ್ನಾನಕ್ಕೆಂದು ಬರುವ ಇಲ್ಲಿನವರು ಮತ್ತು ಬೇರೆಡೆಯಿಂದ ಬಂದಂಥವರು ಸಹ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾತ್ರಿ ವೇಳೆ ಕೆಲವು ಅವಿವೇಕಿಗಳು ಮದ್ಯಪಾನ ಮಾಡಿ ಗ್ಲಾಸ್ ಮತ್ತು ಬಾಟಲಿಗಳನ್ನು ಒಡೆದು ಹೋಗುವುದು ಸರಿಯಲ್ಲ. ಅಂತಹವರನ್ನು ಮುಂಬರುವ ದಿನಗಳಲ್ಲಿ ಪೊಲೀಸ್ ವಶಕ್ಕೆ ಕೊಡುವ ವ್ಯವಸ್ಥೆ ಮಾಡಲಾಗುವುದು. ನನ್ನ ಊರು, ನನ್ನ ಹೊಣೆ ಅಂದರೆ ಇದು ಬಹಳ ಜವಾಬ್ದಾರಿ ಯುಳ್ಳದ್ದಾಗಿದ್ದು, ಮುಂಬರುವ ದಿನಗಳಲ್ಲಿ ಇದಕ್ಕೆ ನನ್ನ ಎಲ್ಲಾ ಸಹಕಾರವಿದೆ ಎಂದು ಹೇಳಿದರು.
ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಪ್ರತಿ ವಾರಕ್ಕೊಮ್ಮೆ ಭಾನುವಾರಗಳಂದು ನಡೆಸುವ ತುಂಗಭದ್ರಾ ತಾಯಿಯ ತಟದಲ್ಲಿ ನಡೆಸುವ ಎರಡನೇ ವಾರದ ಇಂದಿನ ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿದೆ.ಪುಟ್ಟ ಮಕ್ಕಳಾದಿಯಾಗಿ ತಾಯಂದಿರು ಸಹ ಭಾಗಿಯಾಗಿರುವುದು ನಿಜವಾಗಿಯೂ ಅರ್ಥ ಪೂರ್ಣವಾಗಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ತಾಲೂಕಿನ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗಿಯಾಗಿದ್ದರು.