ದಾವಣಗೆರೆ: ಬರೋಬ್ಬರಿ 43 ವರ್ಷಗಳ ಬಳಿಕ ಕೆರೆ ಭರ್ತಿ ಆಗಿದ್ದರಿಂದ 900 ಎಕರೆ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅದ್ರೆ, ಕೆರೆಯ ಹಿನ್ನೀರಿನ ಭಾಗದ ರೈತರ ತೋಟಗಳಲ್ಲಿ ಮೊಣಕಾಲಷ್ಟು ನೀರು ನಿಂತಿದ್ದರಿಂದ ಕೆಲ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಕೆರೆಯಲ್ಲಿ ಶೇಖರಣೆಯಾಗಿರುವ ನೀರನ್ನು ಕೋಡಿ ಒಡೆದು ಹೊರ ಬಿಡುವಂತೆ ಡಿಸಿ ಆದೇಶಿಸಿದ್ದು, ರೈತರ ಪರ-ವಿರೋಧ ನಡುವೆಯೂ ನೀರು ಬಿಡಲಾಗಿದೆ.
ಹೌದು, ಅಣಜಿ ಗ್ರಾಮದ ಕೂಗಳತೆಯಲ್ಲಿರುವ ಐತಿಹಾಸಿಕ ಕೆರೆ ತುಂಬಿದೆ. ದುರಂತ ಎಂದರೆ, 13 ಸೆಂಟಿಮೀಟರ್ ನಷ್ಟು ನೀರು ಕೆರೆಯಲ್ಲಿ ಅಧಿಕವಾಗಿದ್ದರಿಂದ ಹೆಚ್ಚುವರಿ ನೀರನ್ನು ಹೊರ ಬಿಡಲು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರು ಆದೇಶ ಹೊರಡಿಸಿದ್ದಾರೆ.
ಅಣಜಿ ಕೆರೆಯ ಹಿನ್ನೀರಿನಲ್ಲಿ ಬರುವ ಕೆರೆಯಾಗಲಹಳ್ಳಿಯ ಸುಮಾರು ನೂರಾರು ಎಕರೆ ಅಡಿಕೆ ತೋಟ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಈ ಭಾಗದ ರೈತರು ಕಣ್ಣೀರಿನಲ್ಲಿ ಕೈ ತೊಳೆಯತ್ತಿದ್ದರು. ಕೂಡಲೇ ಕೆರೆಯ ಕೋಡಿ ಒಡೆದು ನೀರನ್ನು ಹೊರಬಿಟ್ಟು ನಮ್ಮ ತೋಟಗಳನ್ನು ಉಳಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ ಡಿಸಿ ಶಿವಾನಂದ ಕಪಾಶಿಯವರು ರೈತರಿಗೆ ಬೆನ್ನೆಲುಬಾಗಿ ನಿಂತು, 13 ಸೆಂಟಿಮೀಟರ್ (ಒಂದುವರೆ ಅಡಿ) ನಷ್ಟು ನೀರನ್ನು ಹೊರಬಿಡುವಂತೆ ಆದೇಶಿಸಿದರು. ಈ ಆದೇಶ ಕೆಲ ರೈತರಿಗೆ ನೋವುಂಟು ಮಾಡಿದ್ರೆ, ಕೆಲ ರೈತರ ಸಂತಸಕ್ಕೆ ಕಾರಣವಾಗಿತ್ತು.
"ಜಿಲ್ಲಾಧಿಕಾರಿ ಆದೇಶವನ್ನು ಅನುಸರಿಸಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೋಡಿ ಒಡೆದು ನೀರನ್ನು ಹೊರ ಬಿಟ್ಟಿರುವುದು ನೋವಿನ ಸಂಗತಿ, ತೋಟದ ಮಾಲೀಕರಿಗೆ ಶಾಶ್ವತ ಪರಿಹಾರ ಕಲ್ಪಸಬೇಕು, ಹೀಗೆ ಕೆರೆಯ ನೀರನ್ನು ಹೊರಬಿಡುವುದು ಸೂಕ್ತವಲ್ಲ, ನೀರು ಹೊರಬಿಡಲು ರೈತರ ವಿರೋಧ ಇದೆ" ಎಂದು ಹೋರಾಟಗಾರ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.