ದಾವಣಗೆರೆ: ಕೊರೊನಾ ನಿಯಂತ್ರಣಕ್ಕೆ ತಾಲೂಕು ಕೇಂದ್ರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸೂಚಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಕೋವಿಡ್ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹರಿಹರ, ಹೊನ್ನಾಳಿ ಮತ್ತು ಜಗಳೂರು ತಾಲೂಕುಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿರ್ವಹಣೆ ಆಗಬೇಕು. ಕೆಲ ತಾಲೂಕುಗಳ ಆರೋಗ್ಯಾಧಿಕಾರಿಗಳ ಬದಲಾವಣೆ ಬಗ್ಗೆ ಡಿಹೆಚ್‍ಒ ಮತ್ತು ಡಿಎಸ್‍ಒ ಜೊತೆ ಚರ್ಚಿಸಿ, ಸೂಕ್ತ ವೈದ್ಯರನ್ನು ನೇಮಿಸುವಂತೆ ತಿಳಿಸಿದರು. ಜೊತೆಗೆ ಕೋವಿಡ್ ನಿರ್ವಹಣೆ ಕುರಿತು ತಾಲೂಕುಗಳಲ್ಲಿ ಉತ್ತಮ ತಂಡಗಳನ್ನು ರಚಿಸಬೇಕು ಎಂದು ನಿರ್ದೇಶನ ನೀಡಿದರು.
ಎಸ್‍ಎಸ್ ಮತ್ತು ಜೆಜೆಎಂ ಮೆಡಿಕಲ್ ಕಾಲೇಜಿನ ಲ್ಯಾಬ್‍ಗಳಲ್ಲಿನ ಕೋವಿಡ್ ಪರೀಕ್ಷೆ ವರದಿಗಳನ್ನು ಐಸಿಎಂಆರ್ ಪೋರ್ಟಲ್‍ಗೆ ಅಪ್‍ಡೇಟ್ ಮಾಡುವುದು ತಡವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಆಡಳಿತಾಧಿಕಾರಿಗಳು ಕ್ರಮ ಕೈಗೊಂಡು ವಿಳಂಬ ಆಗದಂತೆ ಕ್ರಮ ವಹಿಸಬೇಕು. ಈ ರೀತಿ ವಿಳಂಬ ಆಗದಂತೆ ಕ್ರಮವಹಿಸಲು ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೀಡಲಾಗುವುದು. ಯಾವುದೇ ಕಾರಣಕ್ಕೂ ಪರೀಕ್ಷೆಗಳನ್ನು ಮಾಡುವುದು ಬಾಕಿ ಉಳಿಸಿಕೊಳ್ಳಬಾರದೆಂದು ತಿಳಿಸಿದರು.
ಸಾವಿನ ಸಂಖ್ಯೆ ಕಡಿತಗೊಳಿಸಲು ಕ್ರಮ :
ಕೋವಿಡ್‍ನಿಂದ ಆಗುತ್ತಿರುವ ಸಾವಿನ ಪ್ರಮಾಣ ತಗ್ಗಿಸಲು ಡಿಎಸ್‍ಒ ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿಯೂ ಇತರೆಡೆ ಸರ್ವೇ ಮಾಡಿಸಿ ದುರ್ಬಲ ವರ್ಗದವರ ತಪಾಸಣೆ ನಡೆಸಬೇಕು. ಗ್ರಾಮೀಣ ಮತ್ತು ನಗರ ಮಟ್ಟದ ಟಾಸ್ಕ್ ಫೋರ್ಸ್ ಮತ್ತು ವಾರ್ಡ್, ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಪರಿಣಾಮಕಾರಿಯಾಗಿ ಕೋವಿಡ್ ನಿರ್ವಹಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 49 ಆಂಬುಲೆನ್ಸ್‌ಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಆಂಬುಲೆನ್ಸ್‌ಗಳ ಕೊರತೆ ಕಂಡುಬಂದಲ್ಲಿ ತಾಲೂಕು ಅಧಿಕಾರಿಗಳು ತಿಳಿಸಬೇಕು. ಚಿಗಟೇರಿ ಆಸ್ಪತ್ರೆಯಲ್ಲಿ 12 ಹೈಫ್ಲೋ ನೇಸಲ್ ಆಕ್ಸಿಜನ್ ವ್ಯವಸ್ಥೆ ಇದ್ದು, 125 ಬೆಡ್‍ಗಳಿಗೆ ಆಕ್ಸಿಜನ್ ಪಾಯಿಂಟ್‍ಗಳಿದ್ದು, 50 ಬೆಡ್‍ಗಳಲ್ಲಿ ಸೇವೆ ನೀಡಲಾಗುತ್ತಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‍ಗಳನ್ನು ಕೋವಿಡ್‍ಗಾಗಿ ಗುರುತಿಸಲಾಗಿದ್ದು, ಅಲ್ಲಿ ಸಹ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಕೋವಿಡ್ ರೋಗಿಗೆ ತೊಂದರೆಯಾಗದಂತೆ ಆರೋಗ್ಯಾಧಿಕಾರಿಗಳು ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದರು.