ದಾವಣಗೆರೆ:ಸರ್ಕಾರಿ ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗದ ಅಧಿಕಾರಿ ಹಾಗೂ ಸಿಬ್ಬಂದಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸುಮಾರು 100ಕ್ಕೂ ಅಧಿಕ ನೋಟಿಸ್ ಜಾರಿ ಮಾಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಕಚೇರಿಗೆ ಚಕ್ಕರ್ ಹಾಕೋರಿಗೆ ಬಿಸಿ ಮುಟ್ಟಿಸಿದ ದಾವಣಗೆರೆ ಡಿಸಿ ಹೌದು.. ಜಿಲ್ಲಾಧಿಕಾರಿಯಾಗಿ ಕೇವಲ 48 ದಿನದಲ್ಲೇ ಮಹಾಂತೇಶ್ ಬೀಳಗಿಯವರು ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ದಾವಣಗೆರೆಯ ತಾಲೂಕು ಕಚೇರಿ, ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿ ನೀಡುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ತಾವೇ ಖುದ್ದಾಗಿ ತೆರಳಿ ಅಧಿಕಾರಿಗಳ ಹಾಜರಿ ಗಮನಿಸುತ್ತಾರೆ, ನಿಗದಿತ ವೇಳೆಗೆ ಕಚೇರಿಗೆ ಬಾರದಿದ್ದ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ಮತ್ತೆ ಕಂಡು ಬಂದರೆ ಮುಂದಿನ ದಿನಗಳಲ್ಲಿ ಅಂತಹ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವೇತನ ತಡೆ ಹಿಡಿಯಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿಯಾಗಿ ಮಹಾಂತೇಶ್ ಬಿಳಗಿಯವರು ಅಧಿಕಾರ ವಹಿಸಿಕೊಂಡು ಇನ್ನೂ 48 ದಿನ ಕಳೆದಿಲ್ಲ, ಇಷ್ಟು ದಿನದಲ್ಲೇ ದಾವಣಗೆರೆ ನಗರದ ಬಹುತೇಕ ಎಲ್ಲಾ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರ ವರ್ಗಕ್ಕೆ ಟಾನಿಕ್ ನೀಡಿದ್ದಾರೆ. ಸುಮಾರು 100 ಅಧಿಕ ನೋಟಿಸ್ ಜಾರಿ ಮಾಡಿ ಉತ್ತರ ಪಡೆದಿದ್ದಾರೆ. ಬೆಳಗ್ಗೆ ತಡವಾಗಿ ಬರುವುದು, ಸಂಜೆ ಬೇಗನೇ ತೆರಳುವುದು ಡಿಸಿಯವರ ಗಮನಕ್ಕೆ ಬಂದ ಹಿನ್ನಲೆ ಕಚೇರಿಗಳಿಗೆ ಭೇಟಿ ನೀಡಿ ಖಡಕ್ ಸಂದೇಶ ರವಾನೆ ಮಾಡುತ್ತಿದ್ದಾರೆ.
ಮೊದಲ ಭಾರೀ ನೋಟಿಸ್ ನೀಡಿ ಉತ್ತರ ಪಡೆದಿದ್ದೇನೆ, ಇನ್ನೊಂದು ಭಾರೀ ನೋಟಿಸ್ ನೀಡಿ, ಮೂರನೇ ಭಾರಿಯೂ ಹೀಗೆ ಮುಂದುವರೆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ, ನಾವೆಲ್ಲ ಸರ್ಕಾರಿ ಅಧಿಕಾರಿಗಳು, ಜನರು ಸಮಸ್ಯೆ ಪರಿಹರಿಸಿಕೊಳ್ಳಲು ಕಚೇರಿಗೆ ಬರುತ್ತಾರೆ, ಆದರೆ ಅವರಿಗೆ ಸರಿಯಾದ ಕೆಲಸ ಮಾಡಿಕೊಡಲು ಅಧಿಕಾರಿಗಳೇ ಇರುವುದಿಲ್ಲ, ಸರಿಯಾದ ಸಮಯಕ್ಕೆ ಹಾಜರಿರಬೇಕು, ಸಂಜೆ ಹೊರಡುವ ಸಮಯವು ಸರಿಯಾಗಿ ಇರಬೇಕು ಇಲ್ಲದಿದ್ದಲ್ಲಿ ಕ್ರಮ ಕಟ್ಟಿಟ್ಟಬುತ್ತಿ ಎಂದು ಸಂದೇಶ ರವಾನೆ ಮಾಡಿದ್ದಾರೆ.