ದಾವಣಗೆರೆ: ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಪರಿಸ್ಥಿತಿ ಹೀಗಿದ್ದರೂ ತಲೆ ಕೆಡಿಸಿಕೊಳ್ಳದ ಹಳೇ ದಾವಣಗೆರೆ ಜನರಿಗೆ ಬಿಸಿ ಮುಟ್ಟಿಸಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮುಂದಾಗಿದ್ದಾರೆ. ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದ ಮುಸ್ಲಿಂ ಸಮುದಾಯವರಿಗೆ ಸಂಜೆ 7 ಗಂಟೆ ಬಳಿಕವೇ ಕೊರೊನಾ ಲಸಿಕೆ ನೀಡಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಳೇ ದಾವಣಗೆರೆ ಹಾಗೂ ಎಲ್ಲಾ ಮಸೀದಿಗಳ ಧರ್ಮ ಗುರುಗಳು ಹಾಗೂ ಮಸೀದಿಗಳ ಕಮಿಟಿಯವರನ್ನು ಕರೆಯಿಸಿ ಸಭೆ ನಡೆಸಿದ ಜಿಲ್ಲಾಧಿಕಾರಿ, ಕಳೆದ ವರ್ಷದ ಕೊರೊನಾ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಇಡೀ ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಸಮುದಾಯದ ಜನರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಕೊಡಿಸುವಂತೆ ಅವರು ತಿಳಿ ಹೇಳಿದರು.
'ಬೇಕಾದಷ್ಟು ವ್ಯಾಕ್ಸಿನ್ ನಮ್ಮಲ್ಲಿವೆ, ಭಯ ಬೇಡ'
ನಮ್ಮ ಜಿಲ್ಲೆಯಲ್ಲಿ ಬೇಕಾದಷ್ಟು ಕೊರೊನಾ ವ್ಯಾಕ್ಸಿನ್ ಇದೆ. ಜನರು ಹೆದರುವ ಅವಶ್ಯಕತೆ ಇಲ್ಲ. ಬದಲಾಗಿ ವ್ಯಾಕ್ಸಿನ್ ಪಡೆಯಲು ಜನರು ಮುಂದೆ ಬರಬೇಕು ಎಂದರು.
ದಾವಣಗೆರೆ ದಕ್ಷಿಣ ಭಾಗ (ಹಳೇ ದಾವಣಗೆರೆ)ಯಲ್ಲಿ ವ್ಯಾಕ್ಸಿನ್ ಪಡೆಯಲು ಜನ ಮುಂದೆ ಬಾರದ ಕಾರಣ ಆಯಾ ಧರ್ಮದ ಗುರುಗಳು, ಪಾಲಿಕೆ ಸದಸ್ಯರ ಮೂಲಕ ಜನರಿಗೆ ಲಸಿಕೆ ನೀಡಲು ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ 4 ಲಕ್ಷ 17 ಸಾವಿರ ಕೊರೊನಾ ಲಸಿಕೆ ನೀಡುವ ಗುರಿ ಮುಟ್ಟುತ್ತೇವೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಮಾತನಾಡುತ್ತಾ, ಕಳೆದ ಒಂದೇ ದಿನ 60 ಪ್ರಕರಣಗಳು ಪತ್ತೆಯಾಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ 328 ಪಾಸಿಟಿವ್ ಪ್ರಕರಣಗಳಿದ್ದು, ಅದರಲ್ಲಿ 147 ಜನ ಆಸ್ಪತ್ರೆಯಲ್ಲಿದ್ದರೆ, 132 ಜನ ಹೋಮ್ ಐಸೋಲೇಷನ್ನಲ್ಲಿದ್ದಾರೆ. 1882 ಬೆಡ್ಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಡಲಾಗಿದೆ. 93 ವೆಂಟಿಲೇಟರ್ ಬಳಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.