ದಾವಣಗೆರೆ : 18 ವರ್ಷ ಪೂರೈಸಿರುವ ಯುವ ಹಾಗೂ ಭವಿಷ್ಯದ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜ.6, 7 ಮತ್ತು 8 ರಂದು ಹಮ್ಮಿಕೊಳ್ಳಲಾಗಿರುವ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2020 ಜ. 01ಕ್ಕೆ 18 ವರ್ಷಗಳನ್ನು ಪೂರೈಸುವ ಯುವ ಮತದಾರರು ನಮೂನೆ-6 ನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗಳಿಗೆ ನೀಡುವ ಮೂಲಕ ನೊಂದಾಯಿಸಿಕೊಳ್ಳಲು ಎಲ್ಲಾ ಕಾಲೇಜು, ವಿಶ್ವವಿದ್ಯಾನಿಲಯದ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದರು.