ದಾವಣಗೆರೆ:ರಸ್ತೆ ಅಗಲೀಕರಣವನ್ನು ಶೀಘ್ರದಲ್ಲಿಯೇ ಆರಂಭಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ನಗರದ ಅಖ್ತರ್ ರಾಜಾ ಸರ್ಕಲ್ ರಿಂಗ್ ರೋಡ್ ರಸ್ತೆಯಿಂದ ಅಹಮದ್ ನಗರ, ಬಾಷಾ ನಗರ, ಆಜಾದ್ ನಗರ ಮುಖ್ಯರಸ್ತೆಯ ಅಗಲೀಕರಣದ ಸಂಬಂಧ ಜಿಲ್ಲಾಡಳಿತ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಅರ್ಧಕ್ಕೆ ನಿಂತ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕೆಲಸಗಳು ಮಾಡಬೇಕು ಎನ್ನುವ ದೃಷ್ಠಿಯಿಂದ ಈ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಅತಿಕ್ರಮಣ, ಒತ್ತುವರಿಯನ್ನು ಸರಿಪಡಿಸಿ ಜೊತೆಗೆ ತೆರವುಗೊಳಿಸುವುದರ ಮೂಲಕ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭ:
ಸ್ಥಳೀಯ ಶಾಸಕರ ನೆರವಿನೊಂದಿಗೆ ಈ ಭಾಗದ ಕಾರ್ಪೊರೇಟರ್ ಹಾಗೂ ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಜಿಲ್ಲಾಡಳಿತ ತಂಡದೊಂದಿಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಇದಾದ ಬಳಿಕ ಮೇಯರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಈಗಾಗಲೇ ಮುಖಂಡರು, ಧಾರ್ಮಿಕ ಸಮಿತಿಯವರು ರಸ್ತೆ ಅಗಲೀಕರಣಕ್ಕೆ ಒತ್ತುವರಿ ತೆರವುಗೊಳಿಸಲು ಅಡ್ಡಿಯಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಇದೊಂದು ಮಾದರಿ ರಸ್ತೆಯಾಗಬೇಕು ಎನ್ನುವ ಮಹತ್ವಾಕಾಂಕ್ಷೆ ನಮ್ಮದಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಅನೇಕ ಚಟುವಟಿಕೆಗಳು ನಿಂತಿದ್ದವು. ಆದರೆ ಇದೀಗ ಈ ಎಲ್ಲಾ ಚಟುವಟಿಕೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ನಮಗೂ ಸಾಕಷ್ಟು ನಿರ್ದೇಶನ ಹಾಗೂ ಕಾಲಮೀತಿ ಇದೆ. ಈ ಕಾಲಮಿತಿಯೊಳಗೆ ಭೌತಿಕತೆಯೊಂದಿಗೆ ಆರ್ಥಿಕ ಪ್ರಗತಿ ಸಾಧಿಸಬೇಕಾಗಿದೆ ಎಂದರು.
ಬಳಿಕ ಮೇಯರ್ ಬಿ.ಜಿ.ಅಜಯ್ ಕುಮಾರ್ ಮಾತನಾಡಿ, ಸುಮಾರು ಮೂವತ್ತು ವರ್ಷದಿಂದ ರಸ್ತೆ ಅಗಲೀಕರಣವಾಗದ ಹಿನ್ನೆಲೆಯಲ್ಲಿ ಈ ಭಾಗದ ಧಾರ್ಮಿಕ ಮುಖಂಡರು ಹಾಗೂ ಜನರು ಮನವಿ ಸಲ್ಲಿಸಿದ್ದರು. ಆದಷ್ಟು ಬೇಗ ರಸ್ತೆ ತೆರವುಗೊಳಿಸಿ 60 ಅಡಿ ರಸ್ತೆ ನಿರ್ಮಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಜನರ ಓಡಾಟಕ್ಕೆ ರಸ್ತೆ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.