ದಾವಣಗೆರೆ:ಇಬ್ಬರುಪ್ರೇಮಿಗಳು ಪ್ರೀತಿಸಿ ಮದುವೆಯಾಗಿರುವ ಹಿನ್ನೆಲೆ ಹುಡುಗನ ಪೋಷಕರ ಮೇಲೆ ಯುವತಿಯ ಪೋಷಕರು ಮತ್ತು ಸಂಬಂಧಿಕರು ಅಮಾನುಷವಾಗಿ ಹಲ್ಲೆ ಮಾಡಿರುವ ಪ್ರಕರಣ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುಗನ ಪೋಷಕರ ಮೇಲೆ ಹಲ್ಲೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹರಿಹರ ತಾಲೂಕಿನ ಗ್ರಾಮವೊಂದರ ಯುವಕ-ಯುವತಿ ಪರಸ್ಪರ ಪ್ರೀತಿಸಿ 20 ದಿನಗಳ ಹಿಂದೆ ದೇವಾಲಯದಲ್ಲಿ ಮದುವೆಯಾಗಿದ್ದರು. ನಂತರ ಉಪನೋಂದಣಿ ಕಚೇರಿಯಲ್ಲಿ ವಿವಾಹದ ನೋಂದಣಿ ಮಾಡಿಸಿದ್ದರು. ಡಿ 11ರ ಸಂಜೆ ಹುಡುಗನ ಮನೆಗೆ ಬಂದ ಯುವತಿಯ ಪೋಷಕರು, ನಿಮ್ಮ ಮಗ ನಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾನೆ, ಆತ ಎಲ್ಲಿದ್ದಾನೆ? ಅವರನ್ನು ಕರೆದುಕೊಂಡು ಬಾ ಎಂದು ಹುಡುಗನ ತಂದೆಗೆ ಗದರಿಸಿದ್ದಾರೆ. ಆಗ ಅವರು ತಮಗೆ ಗೊತ್ತಿಲ್ಲ ಅಂದಿದ್ದಕ್ಕೆ ಏಕಾಏಕಿ ಹುಡುಗಿ ಪೋಷಕರು ಮನೆಯ ಮುಂದೆಯೇ ಯುವಕನ ತಂದೆಯ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಮಧ್ಯೆ ಪ್ರವೇಶ ಮಾಡಿದ ಸ್ಥಳೀಯರ ಮೇಲೆಯೂ ಹಲ್ಲೆ ನಡೆದಿದೆ ಎನ್ನಲಾಗಿದೆ.