ದಾವಣಗೆರೆ: ಸದ್ಯ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ತಾಲಿಬಾನ್ ಭಯೋತ್ಪಾದಕರು ಇಡೀ ದೇಶವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿನ ಜನರು ಹಾಗೂ ಇತರ ದೇಶದ ಪ್ರಜೆಗಳು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ದಾವಣಗೆರೆಯ ವಿನಯ್ ಎಂಬವರು ಇದೀಗ ಸುರಕ್ಷಿತವಾಗಿ ತಾಯ್ನಾಡು ತಲುಪಿ ನಿಟ್ಟುಸಿರು ಬಿಟ್ಟಿದ್ದಾರೆ.
ಅನಗೋಡು ಬಳಿ ಇರುವ ಸುಲ್ತಾನಿಪುರದ ನಿವಾಸಿ ವಿನಯ್ ಅಫ್ಘಾನಿಸ್ತಾನದಿಂದ ಪಾರಾಗಿ ದಾವಣಗೆರೆಗೆ ಬಂದವರು. ಬೆಂಗಳೂರಿನ ಸಿಆರ್ಸಿ ಎಂಬ ಹೆಸರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, 2010-11ರಲ್ಲಿ ಅಫ್ಘಾನಿಸ್ಥಾನಕ್ಕೆ ತೆರಳಿದ್ದ ಅಲ್ಲಿ ಅಟೋಮಿಷನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಂದಹಾರ್ನಲ್ಲಿ ಕೆಲಸ ಆರಂಭಿಸಿದ ಇವರು 2017ರವರೆಗೆ ಅಲ್ಲಿಯೇ ಕಾರ್ಯ ನಿರ್ವಹಿಸಿದ್ದಾರೆ. ಆ ನಂತರ 2018ರ ಕೊನೆಗೆ ಮಜಾರೆ ಶರೀಫ್ ವಾಟರ್ ಡಿಪಾರ್ಟ್ಮೆಂಟ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿ, ಕಾಬೂಲ್ ಹಮೀದ್ ಕರ್ಜಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಅಲ್ಲಿ ಉದ್ಯೋಗ ಮುಂದುವರೆಸಿದ್ದರು.