ದಾವಣಗೆರೆ: ಕೊಳಗೇರಿಯ ಮಕ್ಕಳಿಗೆ ಪೌಷ್ಟಿಕತೆ ಕೊರತೆ ಕಾಡಬಾರದೆಂಬ ಕಾರಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ಕಾರ್ಯಕ್ರಮ ರೂಪಿಸಿದೆ. ಕೊರೊನಾ ಭೀತಿಯಿಂದ ಅಂಗನವಾಡಿಗಳು ಬಂದ್ ಆಗಿದ್ರೂ ಮನೆ ಮನೆಗೆ ತೆರಳಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಕಾಳಜಿವಹಿಸಿ ಜಿಲ್ಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ 5 ತಾಲೂಕುಗಳಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಬಡಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ಬಗ್ಗೆ ಪದೇಪದೆ ತಪಾಸಣೆ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವ ಮಕ್ಕಳೂ ಅಪೌಷ್ಟಿಕತೆಯಿಂದ ಬಳಲಬಾರದು. ಪ್ರತಿ ಮನೆ ಮನೆಗೂ ಹೋಗಿ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಕಾಳಜಿ.. ಜಿಲ್ಲೆಯಲ್ಲಿ ಒಟ್ಟು 1,721 ಅಂಗನವಾಡಿ ಕೇಂದ್ರಗಳಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 462 ಕೇಂದ್ರಗಳಿವೆ. ಒಟ್ಟು 11 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದು, ಈ ಪೈಕಿ 224 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಮಕ್ಕಳನ್ನು ತೀವ್ರ ನಿಗಾವಹಿಸಿ ನೋಡಿಕೊಳ್ಳಲಾಗುತ್ತಿದೆ. ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿರುವುದರಿಂದ ಈ ಮಕ್ಕಳಿಗೆ ಪುನರ್ವಸತಿ ಕೇಂದ್ರಗಳಲ್ಲಿ 13 ದಿನಗಳ ಕಾಲ ಅಗತ್ಯ ಚಿಕಿತ್ಸೆ, ಔಷಧ ಕೊಡಿಸಲಾಗುತ್ತಿದೆ. ಮಕ್ಕಳ ಪೋಷಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಈ ಅವಧಿಯಲ್ಲಿ 275 ರೂ. ಹಣ ನೀಡಲಾಗುತ್ತಿದೆ. ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ತಾಯಂದಿರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.
ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಮಕ್ಕಳ ಸರ್ವೇ :ಯಾವ ಮಕ್ಕಳು ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಾಟ್ಸ್ಆ್ಯಪ್ ಗ್ರೂಪ್ ಮಾಡಲಾಗಿದೆ. ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಎಲ್ಲಾ ಮಕ್ಕಳ ಮಾಹಿತಿ ಪಡೆಯುತ್ತಾರೆ. ಈ ಗ್ರೂಪ್‌ನ ಮೂಲಕ ಮಾಹಿತಿ ನೀಡುತ್ತಾರೆ. ಹಾಲಿನ ಪೌಡರ್, ಮೊಟ್ಟೆ, ತರಕಾರಿ, ಹಣ್ಣು ಸೇರಿ ಪೌಷ್ಟಿಕ ಆಹಾರ ನೀಡುವ ಕಾರ್ಯ ಕೋವಿಡ್ ಬಂದ ಮೇಲೆಯೂ, ಮುಂಚಿನಿಂದಲೂ ಹಾಗೂ ಈಗ ಸಹ ಮುಂದುವರಿದಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ ಹೆಚ್ ವಿಜಯ್ ಕುಮಾರ್.
ಕೇಂದ್ರ ಸರ್ಕಾರದ 'ಪೋಷಣ್' ಮಾಸಾಚರಣೆ ಕಾರ್ಯಕ್ರಮ ಈಗಾಗಲೇ ಚಾಲನೆಗೊಂಡಿದೆ. ಆರೋಗ್ಯ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಯು ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಶ್ರಮಿಸುತ್ತಿದೆ. ಅಪೌಷ್ಟಿಕತೆಯ ಕಾರಣಕ್ಕೆ ಮಕ್ಕಳು ಅಸ್ವಸ್ಥಗೊಳ್ಳುವುದು ಹಾಗೂ ಮರಣ ಹೊಂದುವುದನ್ನು ತಪ್ಪಿಸಲು ಕ್ರಮಕೈಗೊಳ್ಳುತ್ತಿದೆ. ಈ ಲಕ್ಷಣ ಪ್ರಾರಂಭದಲ್ಲಿ ಗುರುತಿಸಿ ಉನ್ನತ ಚಿಕಿತ್ಸೆಗೆ ಶಿಫಾರಸು ಮಾಡಿ ಸೇವೆ ನೀಡುವ ಮೂಲಕ ಮಕ್ಕಳು ಗಂಭೀರ ಸ್ಥಿತಿ ತಲುಪುವುದನ್ನು ತಡೆಯಲು ಶ್ರಮ ವಹಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ಶೇ.10.91 ಅಪೌಷ್ಠಿಕತೆ ಇತ್ತು. ಈ ಬಾರಿ ಶೇ. 8.5ರಷ್ಟು ಆಗುವ ಮೂಲಕ ಶೇ.2.30ರಷ್ಟು ಕಡಿಮೆಯಾಗಿದೆ. ಪ್ರತಿ ತಾಲೂಕು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಭೆ ನಡೆಸಿ ನಂತರ ಮಾಹಿತಿ ಬೋರ್ಡ್ ದಾಖಲಾತಿಯಲ್ಲಿ ಫೋಟೋ ಸಹಿತ ಹಾಕಲಾಗುವುದು. ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ಯಾವ ಅಂಗನವಾಡಿ ಶಿಕ್ಷಕಿಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಗುರುತಿಸುತ್ತಾರೋ ಅಂತವರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.