ಕರ್ನಾಟಕ

karnataka

ETV Bharat / state

ಕುಸ್ತಿ-ಕಲಿಗಳ ನಾಡು ದಾವಣಗೆರೆಗೆ ಈಗ ಖೇಲೋ ಇಂಡಿಯಾದ ಗರಿ! - ಖೇಲೋ ಇಂಡಿಯಾ 2021

ದಾವಣಗೆರೆ ನಗರದಲ್ಲಿರುವ ಕುಸ್ತಿ ತರಬೇತಿ ಕೇಂದ್ರ ಇದೀಗ ಖೇಲೋ ಇಂಡಿಯಾ ಕುಸ್ತಿ ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿದೆ. ಈ ಕುಸ್ತಿ ಕೇಂದ್ರದಲ್ಲಿ ಎರಡೂವರೆ ದಶಕದಲ್ಲಿ 200 ರಿಂದ 250 ಜನ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತಯಾರಾಗಿದ್ದಾರೆ. ಇಲ್ಲಿ ತರಬೇತಿ ಪಡೆದವರು ಏಕಲವ್ಯ, ಕರ್ನಾಟಕ ಕ್ರೀಡಾ ರತ್ನದಂಥ ಶ್ರೇಷ್ಠ ಪ್ರಶಸ್ತಿಗೆ ಭಾಜನಾರಾಗಿದ್ದಾರೆ.

davangere
ದಾವಣಗೆರೆಗೆ ಖೇಲೋ ಇಂಡಿಯಾದ ಗರಿ

By

Published : Jun 24, 2021, 6:49 PM IST

Updated : Jun 24, 2021, 7:22 PM IST

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಕುಸ್ತಿ ಕಲಿಗಳ ನಾಡು. ಇದು ಕುಸ್ತಿ ಕೇಂದ್ರ ಕೂಡ ಹೌದು. ಸಾಕಷ್ಟು ಜನ ಕುಸ್ತಿಪಟುಗಳನ್ನು ಬೆಳೆಸಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಲ್ಲಿಯ ಕುಸ್ತಿ ಪಟುಗಳು ದಾವಣಗೆರೆಯ ಕೀರ್ತಿಯನ್ನು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ್ದಾರೆ. ಇಂತಹ ಜಿಲ್ಲಾ ಕೇಂದ್ರದಲ್ಲಿರುವ ತರಬೇತಿ ಕೇಂದ್ರಕ್ಕೆ, ಕೇಂದ್ರ ಸರ್ಕಾರದ ಖೇಲೋ ಇಂಡಿಯಾದ ಕುಸ್ತಿ ತರಬೇತಿ ಕೇಂದ್ರವಾಗುವ ಅದೃಷ್ಟವನ್ನು ಕಲ್ಪಿಸಿರುವುದು ಈ ಭಾಗದ ಕುಸ್ತಿ ಪಟುಗಳ ಸಂತಸಕ್ಕೆ ಕಾರಣವಾಗಿದೆ.

ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತಯಾರು..

ಈ ನಗರದಲ್ಲಿರುವ ಕುಸ್ತಿ ತರಬೇತಿ ಕೇಂದ್ರ ಇದೀಗ ಖೇಲೋ ಇಂಡಿಯಾ ಕುಸ್ತಿ ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿದೆ. ಈ ಕುಸ್ತಿ ಕೇಂದ್ರದಲ್ಲಿ ಎರಡೂವರೆ ದಶಕದಲ್ಲಿ 200 ರಿಂದ 250 ಜನ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತಯಾರಾಗಿದ್ದಾರೆ. ಇಲ್ಲಿ ತರಬೇತಿ ಪಡೆದವರು ಏಕಲವ್ಯ, ಕರ್ನಾಟಕ ಕ್ರೀಡಾ ರತ್ನದಂಥ ಶ್ರೇಷ್ಠ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಪ್ರತಿ ವರ್ಷ ರಾಷ್ಟ್ರಮಟ್ಟದಲ್ಲಿ ಕನಿಷ್ಠ 6 ರಿಂದ 10 ಮೆಡಲ್​ಗಳನ್ನು ಗಳಿಸುತ್ತಾರೆ. ಮಧ್ಯ ಕರ್ನಾಟಕದಲ್ಲಿರೋ ಈ ತರಬೇತಿ ಕೇಂದ್ರ ಒಂದು ರೀತಿಯಲ್ಲಿ ಶ್ರೇಷ್ಠ ಕುಸ್ತಿಪಟುಗಳನ್ನು ತಯಾರು ಮಾಡೋ ಕಾರ್ಖಾನೆ ಇದ್ದಂತೆ.

ಇತ್ತೀಚೆಗೆ ಈ ತರಬೇತಿ ಕೇಂದ್ರಕ್ಕೆ, ಕೇಂದ್ರ ಸರ್ಕಾರದ ಖೇಲೋ ಇಂಡಿಯಾದ ಕುಸ್ತಿ ತರಬೇತಿ ಕೇಂದ್ರವಾಗೋ ಅದೃಷ್ಟ ಒಲಿದು ಬಂದಿದೆ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ನಿರ್ವಹಣೆಯಲ್ಲಿರುವ ಈ ತರಬೇತಿ ಕೇಂದ್ರ ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿದೆ.

ಬೆಣ್ಣೆನಗರಿಯ ಕೀರ್ತಿ ಪತಾಕೆ ಹಾರಿಸಿದ ಜಟ್ಟಿಗಳು..

ಇಲ್ಲಿ ಕುಸ್ತಿ ತರಬೇತಿ ಪಡೆದು ತಯಾರಾದ ಜಟ್ಟಿಗಳು ರಾಷ್ಟ್ರ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ದಾವಣಗೆರೆ ಹಾಗೂ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಓಪನ್ ದಂಗಲ್ ಕಿಂಗ್ ಎಂದೇ ರಾಜ್ಯಾದ್ಯಂತ ಖ್ಯಾತಿ ಪಡೆದ ಕಾರ್ತಿಕ್ ಕಾಟೆ, ಏಕಲವ್ಯ ಪ್ರಶಸ್ತಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮೆಡಲ್ ವಿಜೇತರಾದ ಮಹಮದ್ ರಫೀಕ್ ಹೋಳಿ, ಅರ್ಜುನ್ ಹಲಕುರ್ಕಿ, ಕುಸ್ತಿ ಸಾಧನೆಗಾಗಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಎಲ್. ಆನಂದ್, ಮಲ್ಲಪ್ಪ ಪಾಟೀಲ್ ಮೊದಲಾದವರು ದಾವಣಗೆರೆ ಕುಸ್ತಿ ತರಬೇತಿ ಕೇಂದ್ರದಲ್ಲಿ ಬೆಳೆದ ಕ್ರೀಡಾಪಟುಗಳು.

ದಾವಣಗೆರೆಗೆ ಖೇಲೋ ಇಂಡಿಯಾದ ಗರಿ

ಸಾಧಕರ ಹಿಂದಿದೆ ತರಬೇತುದಾರನ ಶ್ರಮ..

ಈ ಎಲ್ಲ ಕುಸ್ತಿಪಟುಗಳ ಯಶಸ್ಸಿನ ಹಿಂದೆ ತರಬೇತುದಾರ ಆರ್. ಶಿವಾನಂದ್ ಅವರ ಶ್ರಮ ಹೆಚ್ಚಿದೆ. ಇದೇ ಕಾರಣಕ್ಕೆ ಅವರಿಗೆ ರಾಜ್ಯ ಸರ್ಕಾರ 2015ರಲ್ಲಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ. ಪ್ರಸಕ್ತ ಸಾಲಿನಲ್ಲಿ ಈ ಕುಸ್ತಿ ಕೇಂದ್ರ, ಕೇಂದ್ರ ಸರ್ಕಾರ ಪ್ರತಿಷ್ಠಿತ ಖೇಲೋ ಇಂಡಿಯಾದ ಕುಸ್ತಿ ತರಬೇತಿ ಕೇಂದ್ರವಾಗಿ ಅನುಮೋದನೆಗೊಂಡಿದೆ. ದಾವಣಗೆರೆಗೆ ಖೇಲೋ ಇಂಡಿಯಾದ ಗರಿ ಸೇರಲು ಕುಸ್ತಿಪಟುಗಳ ಸಾಧನೆ ಹಾಗೂ ಕುಸ್ತಿ ತರಬೇತುದಾರರ ಪರಿಶ್ರಮವೇ ಕಾರಣವಾಗಿದೆ.

ಬೆಣ್ಣೆನಗರಿ ಈಗ ಕುಸ್ತಿಪಟುಗಳ ತವರು..

ಒಟ್ಟಾರೆ ದಾವಣಗೆರೆ ಕೇವಲ ಬೆಣ್ಣೆ ನಗರಿ, ವಿದ್ಯಾನಗರಿ ಮಾತ್ರವಲ್ಲದೆ, ಇದು ಕುಸ್ತಿ ಪಟುಗಳ ತವರೂರು ಕೂಡ ಹೌದು ಎಂಬುದಕ್ಕೆ ಖೇಲೋ ಇಂಡಿಯಾ ಕುಸ್ತಿ ಕೇಂದ್ರಕ್ಕೆ ಆಯ್ಕೆಯಾಗಿರುವುದೇ ಸಾಕ್ಷಿ. ದಾವಣಗೆರೆಯ ಹಲವು ಹೆಸರಾಂತ ಕುಸ್ತಿಪಟುಗಳು ಕುಸ್ತಿ ಕ್ರೀಡೆಯನ್ನು ಜೀವಂತವಾಗಿಡಲು ಪ್ರೇರಣೆಯಾಗಿದ್ದಾರೆ. ಕೇಂದ್ರ ಸರ್ಕಾರ ಪ್ರಾಯೋಜಿತ ಖೇಲೋ ಇಂಡಿಯಾ ಯೋಜನೆ ವ್ಯಾಪ್ತಿಗೆ ಸೇರಿದ್ದು ದಾವಣಗೆರೆಯ ಕುಸ್ತಿಪಟುಗಳಿಗೆ ಮಾತ್ರವಲ್ಲದೇ ಕುಸ್ತಿ ಪ್ರೇಮಿಗಳಿಗೂ ಮೀಸೆ ಸವರಿಕೊಳ್ಳವಷ್ಟು ಸಂತಸ ತಂದಿದೆ. ಈ ಕೇಂದ್ರದಿಂದ ಒಲಿಪಿಂಕ್​ ಮೆಡಲ್ ಗೆದ್ದುಬರುವ ಕ್ರೀಡಾಪಟುಗಳು ತಯಾರಾಗಲಿ ಎಂಬುದು ನಮ್ಮಆಶಯ.

Last Updated : Jun 24, 2021, 7:22 PM IST

ABOUT THE AUTHOR

...view details