ವಿಶ್ವ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ಚಿನ್ನ ಗೆದ್ದ ಯುವತಿಯರ ದೂರು ದಾವಣಗೆರೆ :ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಿ ಥ್ರೋಬಾಲ್ ಚಾಂಪಿಯನ್ ಶಿಪ್ ಗೆದ್ದು ಬೀಗಿದ ದಾವಣಗೆರೆ ಗ್ರಾಮೀಣ ಪ್ರತಿಭೆಗಳು, ತಮಗೆ ಜಿಲ್ಲಾಡಳಿತದಿಂದ ಸೂಕ್ತ ಗೌರವ ಸಿಕ್ಕಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ. ರೂಪಾ ಮತ್ತು ಸುಜಾತ ಎಂಬ ಗ್ರಾಮೀಣ ಯುವತಿಯರು ಮಲೇಷಿಯಾ ಹಾಗೂ ನೇಪಾಳದಲ್ಲಿ ಜರುಗಿದ ವರ್ಲ್ಡ್ ಥ್ರೋಬಾಲ್ ಚಾಂಪಿಯನ್ ಶಿಪ್ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅಷ್ಟೇ ಅಲ್ಲ, ಎರಡು ಬಾರಿ ಚಿನ್ನ ಗೆದ್ದಿದ್ದಾರೆ. ಇದೀಗ ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಇವರು ಜಿಲ್ಲೆಯ ಚನ್ನಗಿರಿ ತಾಲೂಕಿನ ಕಗತೂರು ಹಾಗೂ ಹೊದಿಗೆರೆ ಗ್ರಾಮದವರು. ಮಲೇಷಿಯಾದ ಕೌಲಾಲಂಪುರದಲ್ಲಿ ಹಮ್ಮಿಕೊಂಡಿದ್ದ ವರ್ಲ್ಡ್ ಥ್ರೋಬಾಲ್ ಚಾಂಪಿಯನ್ ಶಿಪ್‌ಗಾಗಿ ರಾಜ್ಯದಿಂದ ಆಯ್ಕೆಯಾಗಿದ್ದರು. 'ಡಿ 15 ರಿಂದ 17 ರ ವರೆಗೆ ನಡೆದ ವರ್ಲ್ಡ್ ಥ್ರೋಬಾಲ್ ಚಾಂಪಿಯನ್ ಶಿಪ್ನಲ್ಲಿ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿದ್ದು, 15 ಜನರ ತಂಡ ಮಲೇಷಿಯಾಕ್ಕೆ ತೆರಳಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದೆವು. ಅದ್ರೂ ಯಾವುದೇ ಗೌರವ ಸಿಕ್ಕಿಲ್ಲ' ಎಂದು ಕ್ರೀಡಾಪಟು ರೂಪ ಹೇಳಿದರು.
'ನಮ್ಮ ದೇಶದ ಯುವತಿಯರ ತಂಡ ಫೈನಲ್ನಲ್ಲಿ ಮಲೇಷಿಯಾದ ವಿರುದ್ಧ ಗೆದ್ದು ಚಿನ್ನದ ಪದಕ ತಂದಿದ್ದೇವೆ. ಈ ಮೂಲಕ ಭಾರತದ ಕೀರ್ತಿ ಹೆಚ್ಚಿಸಿದ್ದೇವೆ. ಆದರೆ ಸರ್ಕಾರ ಮಾತ್ರ ನಮ್ಮನ್ನು ಕಡಗಣನೆ ಮಾಡುತ್ತಿದೆ. ಕ್ರೀಡಾ ಇಲಾಖೆಯೂ ನಮ್ಮ ಕಡೆ ಗಮನ ಕೊಡುತ್ತಿಲ್ಲ' ಎಂದು ಕ್ರೀಡಾಪಟು ಸುಜಾತ ತಿಳಿಸಿದರು.
ಕ್ರೀಡಾ ಯುವಜನ ಸೇವಾ ಇಲಾಖೆ ಅಧಿಕಾರಿ ಪ್ರತಿಕ್ರಿಯೆ: 'ಥ್ರೋಬಾಲ್ ಪಂದ್ಯಕ್ಕೆ ರೂಪಾ ಹಾಗೂ ಸುಜಾತ ಎಂಬುವರು ಅಹ್ವಾನಿತ ಪಂದ್ಯಗಳಿಗೆ ಕ್ಲಬ್ ಮೂಲಕ ಆಯ್ಕೆಯಾಗಿ ತಮ್ಮ ಪ್ರತಿಭೆ ತೋರಿದ್ದಾರೆ. ಅದರೆ, ಕ್ರೀಡಾ ಯುವಜನ ಸೇವಾ ಇಲಾಖೆಯ ನಿಯಮಗಳ ಪ್ರಕಾರ ಹೊರದೇಶಗಳಲ್ಲಿ ಆಹ್ವಾನಿಸಿ ಆಡಿಸುವ ಟೂರ್ನಿಗಳಿಗೆ ಪ್ರಾತಿನಿಧ್ಯತೆ ನೀಡಲಾಗುವುದಿಲ್ಲ. ಈ ಟೂರ್ನಿಯು ನಮ್ಮ ಇಲಾಖೆಯಡಿ ನಡೆದಿಲ್ಲ. ನಾವು ಕೂಡ ಕ್ರೀಡಾಪಟುಗಳನ್ನು ಕಳಿಸಿಲ್ಲ. ಇಂತಹ ಟೂರ್ನಿಗಳಿಂದ ದೂರ ಇರಿ ಎಂದು ಮಕ್ಕಳಿಗೆ ಹೇಳಿದ್ದೇವೆ. ಅದರೂ ಇಂತಹ ಟೂರ್ನಿಗಳಿಗೆ ಅವರು ತೆರಳುತ್ತಿದ್ದಾರೆ. ಅವರು ಅಲ್ಲಿ ಸ್ವೀಕರಿಸುವ ಪ್ರಮಾಣ ಪತ್ರವೂ ಸಹ ಉಪಯೋಗಕ್ಕೆ ಬರುವುದಿಲ್ಲ' ಎಂದು ಕ್ರೀಡಾ ಯುವಜನ ಸೇವಾ ಇಲಾಖೆ ಉಪ ನಿರ್ದೇಶಕ ಸುಚೇತ ನೆಲ್ವೀಗಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಥ್ರೋ ಬಾಲ್ ಚಾಂಪಿಯನ್‌ಶಿಪ್ ಗೆದ್ದ ಭಾರತ ತಂಡದಲ್ಲಿ ಮೂವರು ಉಡುಪಿ ಕುವರಿಯರು