ಪಶುವೈದ್ಯಾಧಿಕಾರಿ ಡಾ ವಿಶ್ವನಾಥ್ ಮಾಧ್ಯಮದವರೊಂದಿಗೆ ಮಾತನಾಡಿದರು. ದಾವಣಗೆರೆ: ರೈತರ ಹಾಗೂ ಜಾನುವಾರು ಸಾಕಣೆದಾರರ ಮನೆಬಾಗಿಲಿಗೆ ಹೋಗಿ ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಪಶು ಸಂಜೀವಿನಿ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ಆದರೆ ಪ್ರಚಾರದ ಕೊರತೆಯಿಂದ ಇನ್ನೂ ಬಹಳಷ್ಟು ರೈತರಿಗೆ ಈ ಯೋಜನೆಯ ಮಾಹಿತಿ ಇಲ್ಲ. ಕೆಲವೇ ರೈತರು 1962 ಸಂಖ್ಯೆಯ ಟೋಲ್ ಫ್ರೀ ನಂಬರ್ಗೆ ಕರೆ ಮಾಡುವ ಮೂಲಕ ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಪಶು ಸಂಜೀವಿನಿ ಯೋಜನೆಯಡಿ ಏಳು ಆಂಬ್ಯುಲೆನ್ಸ್ಗಳು ಜಿಲ್ಲೆಗೆ ಸಿಕ್ಕಿವೆ. ಏಳರ ಪೈಕಿ ಆರು ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳು ತಾಲೂಕು ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಉಳಿದ ಒಂದು ಆಂಬ್ಯುಲೆನ್ಸ್ ಮಾತ್ರ ದಾವಣಗೆರೆ ನಗರದ ಪಶು ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಜಾನುವಾರುಗಳಿಗೆ ಆರೋಗ್ಯ ಸಮಸ್ಯೆಯುಂಟಾದಾಗ ರೈತರು 1962 ಸಂಖ್ಯೆಗೆ ಕರೆ ಮಾಡಿದ್ರೇ ಕಾಲಸೆಂಟರ್ದ ಸಿಬ್ಬಂದಿ ಪಶು ಸಂಜೀವಿನಿ ಆಂಬ್ಯುಲೆನ್ಸ್ ಸಿಬ್ಬಂದಿಗೆ ಮಾಹಿತಿ ನೀಡುವರು. ಬಳಿಕ ಈ ಪಶು ಸಂಜೀವಿನಿ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಿದೆ. ಸದ್ಯ ಒಂದು ದಿನಕ್ಕೆ 3-4 ಕಡೆ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಅಕ್ಟೋಬರ್ ಒಂದೇ ತಿಂಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ 100 ಜಾನುವಾರುಗಳಿಗೆ ಚಿಕಿತ್ಸೆ ನೀಡಿರುವ ಪ್ರಕರಣಗಳು ದಾಖಲಾಗಿವೆ. ಸದ್ಯ ಪಶು ಸಂಜೀವಿನಿ ಆಂಬ್ಯುಲೆನ್ಸ್ ಗಳು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ತನಕ ಈಗ ಕೆಲಸ ನಿರ್ವಹಿಸುತ್ತಿವೆ.
1962 ಟೋಲ್ ಫ್ರೀ ನಂಬರ್;ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಒದಗಿಸಲು 1962 ಸಂಖ್ಯೆಯ ಸಹಾಯವಾಣಿ ಸ್ಥಾಪಿಸಿದೆ. ಈ ಸಹಾಯವಾಣಿಗೆ ಜಾನುವಾರು ಮಾಲೀಕರು ಕರೆ ಮಾಡಿದ ತಕ್ಷಣ ಪಶುಸಂಜೀವಿನಿ ವಾಹನಗಳು ಸ್ಥಳಕ್ಕೆ ಧಾವಿಸಿ, ಮನೆ ಬಾಗಿಲಿನಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಿವೆ. ಈ ಆಂಬ್ಯುಲೆನ್ಸ್ ನಲ್ಲಿ ಚಾಲಕ, ಪಶು ಚಿಕಿತ್ಸಾ ಸಹಾಯಕ, ಪಶು ವೈದ್ಯರು ಇರುತ್ತಾರೆ. ರೈತರು ಟೋಲ್ ಫ್ರೀ ನಂಬರ್ಗೆ ಕರೆ ಮಾಡುವ ಮೂಲಕ ತಮ್ಮ ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ಪಡೆಯಬಹುದು.
ಬಿಜೆಪಿ ಸರ್ಕಾರದ ಕನಸಿನ ಕೂಸು;ಪಶು ಸಂಜೀವಿನಿ ಯೋಜನೆ ಹಿಂದಿನ ಬಿಜೆಪಿ ಸರ್ಕಾರದ ಕನಸಿನ ಕೂಸು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ.60 ಮತ್ತು 40ರ ಅನುಪಾತದ ಅನುದಾನದಡಿ ಪಶು ಸಂಜೀವಿನಿಯನ್ನು ಜಾರಿಗೆ ತರಲಾಗಿತ್ತು. 44 ಕೋಟಿ ರೂ. ವೆಚ್ಚದಲ್ಲಿ ತುರ್ತು ಪಶು ಚಿಕಿತ್ಸಾ ವಾಹನಗಳು ಮಂಜೂರಾಗಿದ್ದವು. ಬಿಜೆಪಿ ಆಡಳಿತದ ಅವಧಿಯಲ್ಲಿ ಅಂದಿನ ಪಶು ಸಂಗೋಪನಾ ಸಚಿವರಾಗಿದ್ದ ಪ್ರಭು ಚವ್ಹಾಣ್ 275 ಆಂಬ್ಯುಲೆನ್ಸ್ ಗಳಿಗೆ ಏಕಕಾಲದಲ್ಲಿ ಚಾಲನೆ ನೀಡಿದ್ದರು.
ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ ಹೇಳಿದ್ದಿಷ್ಟು: ದಾವಣಗೆರೆ ಪಶು ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ ವಿಶ್ವನಾಥ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ಏಳು ಪಶು ಸಂಜೀವಿನಿ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿವೆ. ಕಾಲ್ ಸೆಂಟರ್ ಮೂಲಕ ಪಶು ಸಂಜೀವನಿ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸಲಿದೆ. ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾದ ರೈತರು 1962 ಗೆ ಕರೆ ಮಾಡಿದ್ರೆ ತಕ್ಷಣ ವೈದ್ಯ ಸಿಬ್ಬಂದಿ ಇರುವ ಆಂಬ್ಯುಲೆನ್ಸ್ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವರು. ಹಿಂದಿನ ಅಕ್ಟೋಬರ್ ಒಂದೇ ತಿಂಗಳಲ್ಲಿ 100 ಆನಾರೋಗ್ಯ ಹೊಂದಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:ನಿರ್ವಹಣೆ ಇಲ್ಲದೇ ಪಶು ಆ್ಯಂಬುಲೆನ್ಸ್‌ಗೆ ತುಕ್ಕು: ಅಧಿಕಾರಿಗಳು ಹೇಳಿದ್ದೇನು?