ಸ್ವಚ್ಛ ಸರ್ವೇಕ್ಷಣೆ ರಾಜ್ಯ ರ್ಯಾಂಕಿಂಗ್ನಲ್ಲಿ ಬೆಣ್ಣೆ ನಗರಿ ದಾವಣಗೆರೆಗೆ 6ನೇ ಸ್ಥಾನ ದಾವಣಗೆರೆ:ಬೆಣ್ಣೆ ನಗರಿ ದಾವಣಗೆರೆಗೆ ಸ್ವಚ್ಛ ನಗರಿ ಎಂಬ ಗರಿ ಲಭಿಸಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಮಾಡುವ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ದಾವಣಗೆರೆಯು ರಾಜ್ಯ ರ್ಯಾಂಕಿಂಗ್ನಲ್ಲಿ ಆರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಕಳೆದ ಬಾರಿ 21ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದ ದಾವಣಗೆರೆ ನಗರವು ಈ ಬಾರಿ ಸ್ಟಾರ್ ರೇಟಿಂಗ್ನೊಂದಿಗೆ 6 ನೇ ಸ್ಥಾನಕ್ಕೆ ಏರಿದೆ.
ಕೇಂದ್ರ ಸರ್ಕಾರ ಪ್ರತಿವರ್ಷ ದೇಶದ ನಗರಗಳ ಸ್ವಚ್ಛತಾ ನಿರ್ವಹಣೆ ಕುರಿತು ಸಮೀಕ್ಷೆ ಮಾಡಿ ಆ ಮೂಲಕ ನಗರಗಳಿಗೆ ಶ್ರೇಣಿ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ. ಅದರಂತೆ 2023ರ ಸ್ವಚ್ಛ ಸರ್ವೇಕ್ಷಣೆ ನಡೆಸಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ದಾವಣಗೆರೆ 6 ನೇ ಸ್ಥಾನ ಪಡೆದುಕೊಂಡಿದೆ. ಮೊದಲ ಬಾರಿಗೆ ದಾವಣಗೆರೆ ಗಾರ್ಬೇಜ್ ಫ್ರೀ ಸಿಟಿಗಳ ಪಟ್ಟಿಯಲ್ಲಿ ಸ್ಟಾರ್ ರೇಟಿಂಗ್ ಅನ್ನೂ ಸಹ ಪಡೆದುಕೊಂಡಿದೆ.
ಒಟ್ಟಾರೆ ರಾಷ್ಟ್ರ ಮಟ್ಟದಲ್ಲಿ 169ನೇ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ 2022ರಂದು ರಾಜ್ಯದಲ್ಲಿ ದಾವಣಗೆರೆ 21ನೇ ಸ್ಥಾನ ಪಡೆದಿತ್ತು. ಇದೀಗ 2023ರ ಸಮೀಕ್ಷೆಯಲ್ಲಿ 6ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಇನ್ನುಳಿದಂತೆ 2023ರ ಸ್ವಚ್ಛ ಸರ್ವೇಕ್ಷಣೆಯ ರಾಜ್ಯದ ರ್ಯಾಂಕಿಂಗ್ನಲ್ಲಿ ಮೈಸೂರು ನಗರಕ್ಕೆ ಮೊದಲ ಸ್ಥಾನ ಪಡೆದರೆ ಹುಬ್ಬಳ್ಳಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಪಾಲಿಕೆ ಆಯುಕ್ತೆ ರೇಣುಕಾ ಸಂತಸ:ರಾಜ್ಯ ಮಟ್ಟದಲ್ಲಿ ದಾವಣಗೆರೆಗೆ 6ನೇ ಸ್ಥಾನ ಪಡೆಯಲು ಸಹಕರಿಸಿದ ಎಲ್ಲಾ ಸಿಬ್ಬಂದಿ, ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳಿಗೆ ಮುಖ್ಯವಾಗಿ ದಾವಣಗೆರೆ ನಗರದ ನಾಗರಿಕರಿಗೆ ಪಾಲಿಕೆ ಆಯುಕ್ತೆ ರೇಣುಕಾ ಅವರು ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮೂಲದಲ್ಲೇ ಶೇ 100 ಕಸವನ್ನು ಸಂಸ್ಕರಿಸುವ ಪ್ರಕ್ರಿಯೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಮಟ್ಟದ ಸ್ವಚ್ಛ ಸರ್ವೇಕ್ಷಣೆ ಸರ್ವೆಯಲ್ಲಿ ದಾವಣಗೆರೆಗೆ ಸ್ಥಾನ ಲಭಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ದಾವಣಗೆರೆ ಮೊದಲ ಬಾರಿಗೆ ಗುರುತಿಸಿಕೊಂಡಿದೆ. ನ್ಯಾಷನಲ್ ಕ್ಲೀನ್ ಸಿಟಿ ಎಂದರೆ, ಒಂದು ಲಕ್ಷ ಜನಸಂಖ್ಯೆ ಇರುವ ಸಿಟಿಗಳಿಗೆ ಈ ಗರಿ ನೀಡಲಾಗುತ್ತಿದೆ. ದಾವಣಗೆರೆ ರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ಛತೆಯಲ್ಲಿ 169 ಸ್ಥಾನ ಗಳಿಸಿದೆ. ಕರ್ನಾಟಕ ರಾಜ್ಯದ ಎಂಟು ನಗರಗಳಿಗೆ ಈ ಗರಿ ಲಭಿಸಿದೆ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.
ನಗರದ ಎಲ್ಲರೂ ಶ್ರಮಿಸಿ - ಪಾಲಿಕೆ ಸದಸ್ಯ ಅಬ್ದುಲ್ ಲತೀಫ್:ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಪ್ರತಿಕ್ರಿಯಿಸಿ, "ನಾವು ಹೇಗೆ ಅಂದ ಚೆಂದವಾಗಿರುತ್ತೇವೋ, ಹಾಗೇಯೆ ನಮ್ಮ ಊರು ಚೆಂದವಾಗಿರಬೇಕು. ಮುಂಬರುವ ರ್ಯಾಂಕಿಂಗ್ನಲ್ಲಿ ದಾವಣಗೆರೆಯನ್ನು ಒಂದನೇ ಸ್ಥಾನಕ್ಕೇರಲು ನಾವು ಶ್ರಮಿಸಬೇಕಾಗಿದೆ. ನಮ್ಮ ನಗರ ಸ್ವಚ್ಛವಾಗಿರಲು ನಾವೆಲ್ಲರೂ ಕೈ ಜೋಡಿಸೋಣ. ಹಂದಿ, ಬೀದಿ ನಾಯಿ ಮುಕ್ತವಾಗಿರುವಂತ ನಗರ ನಮ್ಮ ದಾವಣಗೆರೆ ಆಗ್ಬೇಕಾಗಿದೆ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಬಾಗಲಕೋಟೆ: ವಿಶೇಷ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ ಮಹಿಳೆಯರು