ದಾವಣಗೆರೆ:ಸ್ವಾತಂತ್ರ್ಯ ಪೂರ್ವದಲ್ಲಿ ಆ ಗ್ರಾಮ, ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ವ್ಯಾಪಾರ ಕೇಂದ್ರ ಆಗಿದ್ದರಿಂದ ಅ ಗ್ರಾಮಕ್ಕೆ ಸಂತೆಬೆನ್ನೂರು ಎಂಬ ಹೆಸರು ಕೂಡ ನಾಮಕರಣ ಮಾಡಲಾಯಿತು. ಆದರೆ ಅದೇ ಗ್ರಾಮ ಇದೀಗ ಸುಂದರ ಐತಿಹಾಸಿಕ ಪುಷ್ಕರಣಿಯನ್ನು ತನ್ನ ಮಡಿಲಿನಲ್ಲಿಟ್ಟುಕೊಂಡು ರಾಜ್ಯ ಅಂತರಾಜ್ಯದ ಪ್ರವಾಸಿಗರನ್ನು ಸೆಳೆದು ಸಂತೆಬೆನ್ನೂರು ಗ್ರಾಮದ ಹಿರಿಮೆಯನ್ನು ಸಾರುತ್ತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಐತಿಹಾಸಿಕ ಪುಷ್ಕರಣಿ ಇದೀಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತಿದೆ. ಪುಷ್ಕರಣಿಯ ಎಂಟು ದಿಕ್ಕುಗಳಿಗೆ ಎಂಟು ಮಂಟಪಗಳಿದ್ದವು ಇದೀಗ ಆರು ಮಾತ್ರ ಉಳಿದಿದ್ದು, ಇಡೀ ರಾಜ್ಯದಲ್ಲೇ ಪುಷ್ಕರಣಿ ಮಧ್ಯೆ ಅತಿದೊಡ್ಡ ಮಂಟಪ ಇರುವುದು ಸಂತೆಬೆನ್ನೂರು ಮುಸಾಫೀರ್‌ಖಾನದಲ್ಲಿ ಮಾತ್ರ ಎಂಬುದು ಸ್ಥಳೀಯರ ವಾದವಾಗಿದೆ.
ನೀರಿನ ಮಧ್ಯೆ ಇರುವ ಅತಿದೊಡ್ಡ ಭವ್ಯವಾದ ಮಂಟಪ ಸುಂದರ ಕಲಾಕೃತಿಯಿಂದ ಕೂಡಿದ್ದು, ಇದರ ಎದುರೇ ಮುಸಾಫೀರ್ ಖಾನಾ (ಮಸೀದಿ) ಇದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚಿತ್ರದುರ್ಗದ ಪಾಳೇಗಾರರ ಆಡಳಿತವಧಿಯಲ್ಲಿ ಈ ಪುಷ್ಕರಣಿ ನಿರ್ಮಾಣ ಮಾಡಲಾಗಿದ್ದು, ಬಳಿಕ ಮುಸ್ಲಿಂ ಅರಸನೊಬ್ಬನ ಆಕ್ರಮಣಕ್ಕೊಳಗಾಗಿ ವಶವಾಯಿತಂತೆ. ಈ ಪುಷ್ಕರಣಿಗೆ ದಾವಣಗೆರೆ ಸೇರಿದಂತೆ ರಾಜ್ಯದಂತ್ಯ ಪ್ರವಾಸಿಗರು ಕುಟುಂಬ ಸಮೇತ ಇಲ್ಲಿಗೆ ಒಂದು ದಿನದ ಟ್ರಿಪ್ ಬರುತ್ತಾರೆ. ಇದಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶದ, ತಮಿಳುನಾಡು, ಕೇರಳ ಮುಂತಾದ ರಾಜ್ಯದ ಪ್ರವಾಸಿಗರನ್ನು ಈ ಪುಷ್ಕರಣಿಯ ಮಂಟಪಗಳು ಆಕರ್ಷಿಸುತ್ತಿವೆ. ದಾವಣಗೆರೆ ನಗರದಿಂದ ಸುಮಾರು 35 ಕಿಮೀ ದೂರ ಕ್ರಮಿಸಿದ್ರೆ ಸಾಕು ಈ ಪ್ರವಾಸಿ ಸ್ಥಳವನ್ನು ತಲುಪಬಹುದಾಗಿದೆ. ಇಲ್ಲಿಗೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಿಲ್ಲ, ಬದಲಾಗಿ ಉಚಿತವಾಗಿ ಪುಷ್ಕರಣಿ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.