ದಾವಣಗೆರೆ:ಜಿಲ್ಲೆಯ ವಾಣಿಜ್ಯೋದ್ಯಮಿ ಜಿ.ಡಿ.ರಮೇಶ್ ಎಂಬವರು ಅಣಬೆ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಸಣ್ಣದಾಗಿ ಅಣಬೆ ಕೃಷಿ ಆರಂಭಿಸಿದ ಅವರು ಈಗ ದಿನಕ್ಕೆ 10 ರಿಂದ 15 ಕೆ.ಜಿ ಇಳುವರಿ ಪಡೆಯುತ್ತಿದ್ದಾರೆ.
ಆರಂಭಿಕ ಹಂತದಲ್ಲಿ ಆಯಿಸ್ಟರ್ ಹಾಗೂ ಮಿಲ್ಕಿ ಮಷ್ರೂಮ್ ಬೆಳೆಯಲು ಮುಂದಾದ ರಮೇಶ್, ಬಳಿಕ 30x40 ವಿಸ್ತೀರ್ಣದ ಗೋದಾಮಿನಲ್ಲಿ ಸಮೃದ್ಧ ಬೆಳೆ ಬೆಳಯಲು ಪ್ರಾರಂಭಿಸಿದರು. ಮೊದಲಿಗೆ ನಷ್ಟ ಅನುಭವಿಸಿದ್ದರೂ ಸಹ ಇದೀಗ ಉತ್ತಮ ಬೆಳೆ ಬಂದು ಯಶಸ್ವಿಯಾಗಿದ್ದಾರೆ.
ಇಷ್ಟೇ ಅಲ್ಲದೇ, ಗೋದಾಮಿನ ತಾಪಮಾನ ಒಂದೇ ಸಮನಾಗಿರಲು ಏರ್ ಕಂಡೀಷನ್ ಸಹ ಅಳವಡಿಸಿದ್ದಾರೆ. ಇನ್ನು ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಟೈಮರ್ ವ್ಯವಸ್ಥೆ ಹೊಂದಿದ ಹ್ಯುಮಿಡಿಫೈಯರ್‌ಗಳನ್ನು ಬಳಸಿದ್ದಾರೆ.
ಅಣಬೆ ಕೃಷಿಯಲ್ಲಿ ಯಶ ಕಂಡ ಜಿ.ಡಿ. ರಮೇಶ್ ಇವೆಲ್ಲವುಗಳ ಜತೆ ಮಿಲ್ಕಿ ಮಶ್ರೂಮ್ ಬೆಳೆಯಲು ಮಣ್ಣಿನ ಅಗತ್ಯವಿತ್ತು. ಯಾವ ಬಗೆಯ ಮಣ್ಣು ಬಳಸಿದರೆ ಹೆಚ್ಚು ಇಳುವರಿ ಪಡೆಯಬಹುದು ಎಂಬುದಕ್ಕೆ ಸತತ 6-7 ತಿಂಗಳು ಸಂಶೋಧನೆ ನಡೆಸಿದರು. ಇದರ ಪ್ರತಿಫಲವೇ ವರ್ಷದ 12 ತಿಂಗಳೂ ಸಹ ಮಶ್ರೂಮ್ ಬೆಳೆದು ಲಾಭ ಪಡೆಯಲು ಸಾಧ್ಯವಾಗಿದೆ.
ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಗೂ ನಿತ್ಯ ನೂರಾರು ಕೆ.ಜಿ ಅಣಬೆ ಸಾಗಿಸಲಾಗುತ್ತಿದೆ. ಕೃಷಿಯನ್ನೂ ಲಾಭದಾಯಕ ಉದ್ಯಮದ ಮಾದರಿಯಲ್ಲಿ ನಡೆಸಲು ಸಾಧ್ಯವಿದೆ ಎಂಬುದಕ್ಕೆ ರಮೇಶ್ ಉದಾಹರಣೆ.