ದಾವಣಗೆರೆ: ಗ್ಯಾಸ್ ಗೀಸರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಪತ್ರಕರ್ತ ರಾಘವೇಂದ್ರ (42) ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಿದ್ಯಾನಗರದ ಅವರ ನಿವಾಸದಲ್ಲಿ ಕಳೆದ ಶನಿವಾರ ಈ ದುರ್ಘಟನೆ ನಡೆದಿತ್ತು. ಗೀಸರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ನಗರದ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಗುರವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ರಾಘವೇಂದ್ರ ಅವರು ಮೃತಪಟ್ಟಿದ್ದಾರೆ. ಹರಿಹರದ ವಿದ್ಯಾನಗರ ನಿವಾಸಿಯಾದ ರಾಘವೇಂದ್ರ ಅವರು ಆರಂಭದಲ್ಲಿ ಪತ್ರಿಕಾ ಏಜೆಂಟ್ ಆಗಿ ಬಳಿಕ ರಾಜ್ಯಮಟ್ಟದ ಪತ್ರಿಕೆಯಲ್ಲಿ ಅರೆಕಾಲಿಕ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ ರಾಘವೇಂದ್ರ ಅವರು ಇತ್ತೀಚೆಗೆ ಪಾಲುದಾರಿಕೆಯಲ್ಲಿ ಹೋಟೆಲ್ ಆರಂಭಿಸಿ ಜೀವನ ಸಾಗಿಸುತ್ತಿದ್ದರು. ಅವರ ಅಗಲಿಗೆಕೆ ಇಡೀ ಕುಟುಂಬಸ್ಥರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಇಂದು ಹರಿಹರದಲ್ಲಿರುವ ನಿವಾಸಕ್ಕೆ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಂತಿಮ ಸಂಸ್ಕಾರ ಮಾಡಲಾಗುವುದೆಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಫಾರ್ಮಾ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ:ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡು ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾದ ಘಟನೆ ಬುಧವಾರ ನಡೆದಿತ್ತು. 'ಬಾಲ್ ಫಾರ್ಮಾ' ಕೆಮಿಕಲ್ ಕಾರ್ಖಾನೆಯ ಎರಡನೇ ಸೆಕ್ಟರ್ನಲ್ಲಿ ಬಾಯ್ಲರ್ ಒತ್ತಡ ಹೆಚ್ಚಾದಾಗ ಒತ್ತಡ ಡಿಸ್ಚಾರ್ಜ್ ಮಾಡಬೇಕಾಗಿತ್ತು. ಆದರೆ, ಪ್ರೆಸರ್ ಡಿಸ್ಚಾರ್ಜ್ ಮಾಡದ ಕಾರಣ ಏಕಾಏಕಿ ಪ್ರೆಸರ್ ಹೆಚ್ಚಾಗಿ ಬಾಯ್ಲರ್ ಸಿಡಿದಿದೆ ಎಂಬ ಮಾಹಿತಿ ತಿಳಿದುಬಂದಿತ್ತು.