ದಾವಣಗೆರೆ: ಭತ್ತ ಖರೀದಿದಾರರು ತಮಗೆ ಇಷ್ಟ ಬಂದಂತೆ ಬೆಲೆ ನಿಗದಿ ಮಾಡುತ್ತಿದ್ದು, ಇದರಿಂದ ನಷ್ಟವಾಗ್ತಿದೆ. ಹಾಗಾಗಿ, ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಭತ್ತವನ್ನು ಬೆಳೆಯುವ ರೈತರೇ ಹೆಚ್ಚಿದ್ದು, ಸಾವಿರಾರು ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಈಗಾಗಲೇ ಭತ್ತ ನಾಟಿ ಮಾಡಿ ಫಸಲು ಕೈಗೆ ಬರುವ ವೇಳೆಯಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಹರಿಹರ ತಾಲೂಕಿನ ಕಡ್ಲೆಗುಂದಿ ಗ್ರಾಮದ ರೈತರು ಸಾವಿರಾರು ಎಕರೆಯಲ್ಲಿ ಭತ್ತ ಬೆಳೆದು ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಮೂರ್ನಾಲ್ಕು ಖರೀದಿದಾರರು ಭತ್ತ ಖರೀದಿಗೆ ಮುಂದೆ ಬಂದರೂ ಕ್ವಿಂಟಾಲ್ ಭತ್ತಕ್ಕೆ ಕೇವಲ 1,450 ರೂಪಾಯಿ ನಿಗದಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕ್ವಿಂಟಾಲ್ ಭತ್ತದ ದರ 2,000 ರೂ.ತನಕ ಇರುತ್ತದೆ. ಈಗ 1,450 ರೂ. ಬೆಲೆಗೆ ಮಾರಾಟ ಮಾಡಿದರೆ, ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ನಷ್ಟ ಉಂಟಾಗಲಿದೆ.