ಕೇವಲ ಆರು ದಿನದಲ್ಲಿ ಒಂದು ಲಕ್ಷ ಆದಾಯ ಗಳಿಸಿದ ದಾವಣಗೆರೆ ರೈತ ದಾವಣಗೆರೆ: ಟೊಮೆಟೊ ಬೆಳೆ ಈ ಬಾರಿ ರೈತರ ಕೈ ಹಿಡಿದಿದ್ದು, ಅಧಿಕ ಲಾಭ ತಂದುಕೊಟ್ಟಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ರೈತ ಕೇವಲ ಆರೇ ದಿನದಲ್ಲಿ ಒಂದು ಲಕ್ಷ ರೂಪಾಯಿ ಲಾಭವನ್ನು ಟೊಮೆಟೊವಿನಿಂದ ಗಳಿಸಿದ್ದಾರೆ. ರೇವಣಪ್ಪ ಲಾಭ ಗಳಿಸಿದ ರೈತ, ರೇವಣಪ್ಪ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ. ಪ್ರಸ್ತುತ ದಿನಗಳಲ್ಲಿ ಟೊಮೆಟೊ ದರ ದುಬಾರಿಯಾಗಿದ್ದರಿಂದ ರೇವಣಪ್ಪಗೆ ಒಳ್ಳೆ ಬೆಲೆಯೇ ಸಿಕ್ಕಿದೆ.
ಟೊಮೆಟೊಗೆ ಚಿನ್ನದ ಬೆಲೆ ಬಂದಿದ್ದರಿಂದ ರೈತ ರೇವಣಪ್ಪ ಬೆಳೆ ಕಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಜಮೀನಿನ ಮಾಲೀಕ ರೇವಣಪ್ಪ ಮೇ ತಿಂಗಳಲ್ಲಿ 6 ಸಾವಿರಕ್ಕೂ ಹೆಚ್ಚು ಟೊಮೆಟೊ ಸಸಿಗಳನ್ನು ನಾಟಿ ಮಾಡಿದ್ದರು. ನಾಟಿ ಮಾಡಿದ ವೇಳೆ ಮಳೆ ಕೈಕೊಟ್ಟಿದ್ದರಿಂದ ಸಸಿಗಳು ನೆಲಕಚ್ಚಿದ್ದವು, ಛಲ ಬಿಡದ ರೈತ ರೇವಣಪ್ಪ ಮತ್ತೆ 5 ಸಾವಿರಕ್ಕೂ ಹೆಚ್ಚು ಟೊಮೆಟೊ ಸಸಿಗಳನ್ನು ನಾಟಿ ಮಾಡಿದ್ದರು. ಈ ಬಾರಿ ವರುಣನ ಕೃಪೆಯಿಂದ ಉತ್ತಮ ಇಳುವರಿ ಬಂದಿದೆ.
ಇದನ್ನೂ ಓದಿ:Tomatoe: ರಾಜಭವನದ ಮೆನುವಿನಲ್ಲಿ ಟೊಮೆಟೊ ಬಳಕೆ ಬೇಡವೆಂದ ಪಂಜಾಬ್ ರಾಜ್ಯಪಾಲ
ಮೊದಲ ಕಟಾವಿನಲ್ಲೇ ಏಳು ಬಾಕ್ಸ್ ಟೊಮೆಟೊ:ನೂರರ ಗಡಿ ದಾಟಿರುವ ಕೆಂಪು ಸುಂದರಿ ಟೊಮೆಟೊ ಗ್ರಾಹಕರ ಜೇಬು ಸುಡುತ್ತಿದೆ. ಈ ವೇಳೆ ರೇವಣಪ್ಪ ಕೇವಲ ಆರು ದಿನಗಳಲ್ಲೇ ಲಾಭ ಗಳಿಸಿದ್ದಾರೆ. ಜುಲೈ 27 ರಂದು ರೈತ ಮೊದಲ ಕಟಾವು ಮಾಡಿದ್ದರು. ಆಗ ಏಳು ಬಾಕ್ಸ್ ಟೊಮೆಟೊ ಇಳುವರಿ ಬಂದಿತ್ತು. ಒಂದು ಬಾಕ್ಸ್ ಟೊಮೆಟೊಗೆ 2200 ರಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರು. ಬಳಿಕ ಎರಡನೇ ಕಟಾವಿನಲ್ಲಿ 16 ಬಾಕ್ಸ್ ಟೊಮೆಟೊ ಇಳುವರಿ ಬಂದಿದ್ದು, ಇದನ್ನು ಪ್ರತಿ ಬಾಕ್ಸ್ಗೆ 2300 ರಂತೆ ಮಾರಾಟ ಮಾಡಿದ್ದರು. ಇನ್ನು ಮೂರನೇ ಕಟಾವಿನಲ್ಲಿ 25 ಬಾಕ್ಸ್ ಟೊಮೆಟೊ ಇಳುವರಿ ಸಿಕ್ಕಿದ್ದು, ಮೂರು ಕಟಾವಿನಿಂದ ರೈತನಿಗೆ ಒಟ್ಟು ಒಂದು ಲಕ್ಷ ಲಾಭ ಸಿಕ್ಕಾಂತಾಗಿದೆ.
ಬಡ ರೈತನ ಕೈ ಹಿಡಿದ ಕೆಂಪು ಸುಂದರಿ: ಕಡುಬಡತನದಲ್ಲೇ ಜೀವನ ಸಾಗಿಸುತ್ತಿದ್ದ ರೈತ ರೇವಣಪ್ಪ ಇದ್ದ ಅಂಗೈಯಷ್ಟು ಜಮೀನಿನಲ್ಲಿ ಟೊಮೆಟೊ ಬೆಳೆದು ಕೈ ಸುಟ್ಟಿಕೊಂಡಿದ್ದರು. ಎರಡನೇ ಬಾರಿ ನಾಟಿ ಮಾಡಿ ಟೊಮೆಟೊ ಬೆಳೆದು ಬಂಪರ್ ಲಾಭ ಪಡೆದಿದ್ದಾರೆ. ಇನ್ನು ಲಾಭ ಗಳಿಸಿರುವ ರೈತ ರೇವಣಪ್ಪರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಟೊಮೆಟೊ ಖರೀದಿಗಾಗಿ ನ್ಯಾಮತಿ ಹೊನ್ನಾಳಿಯ ಕೆಲ ದಲ್ಲಾಳಿಗಳು ಆಗಮಿಸುತ್ತಿದ್ದು, ರೈತನ ಆದಾಯ ದಿನೇ ದಿನೆ ವೃದ್ಧಿಯಾಗುತ್ತಿದೆ. ಬೆಳೆ ಬರಲು ಒಂದು ತಿಂಗಳ ಕಾಲಾವಕಾಶ ಇದ್ದು, ಇನ್ನು 10 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದು ರೈತ ರೇವಣಪ್ಪ ಮಾಹಿತಿ ನೀಡಿದರು.
ಇದನ್ನೂ ಓದಿ: ಮತ್ತೆ ಏರಿಕೆಯತ್ತ ಕಿಚನ್ ಕ್ವೀನ್ ಟೊಮೆಟೊ ಬೆಲೆ.. ಮುಂದಿನ ದಿನಗಳಲ್ಲಿ ಕೆಜಿಗೆ 300 ತಲುಪುವ ಸಾಧ್ಯತೆ!