ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಹಿನ್ನೆಲೆ ತರಾತುರಿಯಿಂದ ದಾಖಲಾತಿ ಸೃಷ್ಟಿಸಿರುವುದು ಹಾಗೂ ವಾಸ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣ 12 ವಿಧಾನ ಪರಿಷತ್ ಸದಸ್ಯರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೋಟಿಸ್ ನೀಡಿದ್ದಾರೆ.
ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ: 12 ಎಂ.ಎಲ್.ಸಿಗಳಿಗೆ ದಾವಣಗೆರೆ ಡಿ.ಸಿ ನೋಟಿಸ್ - Davangere DC notice for 12 mlc
ವಾಸವಿಲ್ಲದಿದ್ದರು ದಾವಣಗೆರೆಯ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಿರುವ 12 ವಿಧಾನ ಪರಿಷತ್ ಸದಸ್ಯರಿಗೆ ಸೂಕ್ತ ದಾಖಲೆ ನೀಡುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೊಟೀಸ್ ನೀಡಿದ್ದಾರೆ.
ಇಂದು ಸಂಜೆ 5 ಗಂಟೆಯೊಳಗಾಗಿ ಅಧಿಕೃತ ದಾಖಲೆ ಸಹಿತ ತಮ್ಮ ಕಚೇರಿಗೆ ಹಾಜರಾಗಿ,ಇಲ್ಲವೇ ಕಚೇರಿಯ ಇ-ಮೇಲ್ಗೆ ಸೂಕ್ತ ದಾಖಲಾತಿ ಒದಗಿಸುವಂತೆ ಸೂಚನೆ ನೀಡಿದ್ದಾರೆ. ನಾಳೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯಲಿದ್ದು, ಕೆ. ಸಿ. ಕೊಂಡಯ್ಯ, ತೇಜಸ್ವಿನಿಗೌಡ, ಹನುಮಂತ ನಿರಾಣಿ, ಯು. ಬಿ. ವೆಂಕಟೇಶ್ ಸೇರಿ 12 ವಿಧಾನ ಪರಿಷತ್ ಸದಸ್ಯರಿಗೆ ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಇವರೆಲ್ಲಾ ಸುಳ್ಳು ಮಾಹಿತಿ ನೀಡಿ ದಾವಣಗೆರೆ ವಿಳಾಸ ಪಡೆದು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ನಿನ್ನೆ ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾ ವೀಕ್ಷಕರಾದ ಹರ್ಷ ಗುಪ್ತಾ, ಡಿಸಿ ಮಹಾಂತೇಶ್ ಬೀಳಗಿ ಪರಿಶೀಲನೆ ವೇಳೆ ಯಾರೂ ಮನೆಯಲ್ಲಿ ವಾಸ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಇನ್ನು ಸೂಕ್ತ ದಾಖಲೆ ನೀಡಲು ವಿಫಲವಾದ್ರೆ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದ್ದಾರೆ.