ದಾವಣಗೆರೆ:ಯುಪಿಎಸ್ಸಿ ಪರೀಕ್ಷೆಯಲ್ಲಿ ದಾವಣಗೆರೆಯ ಮಿರ್ಜಾ ಖಾದರ್ ಬೇಗ್ 336 ನೇ ಸ್ಥಾನ ಡೆಯುವ ಮೂಲಕ ಐಎಎಸ್ ಪಾಸ್ ಆಗಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಮಿರ್ಜಾ ಖಾದರ್ ಬೇಗ್ ನಗರದ ಲೂಡ್ಸ್ ಬಾಯ್ಸ್ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಮಿರ್ಜಾ ಖಾದರ್ ಬೇಗ್, ಬಿಐಇಟಿಯಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. 2014ರಲ್ಲಿ ಫ್ರಾನ್ಸ್ಗೆ ತೆರಳಿ ಚಿನ್ನದ ಪದಕ ಪಡೆಯುವುದರೊಂದಿಗೆ ಎಂಎಸ್ನಲ್ಲಿ ತೇರ್ಗಡೆಯಾಗಿದ್ದರು. ಇದನ್ನು ಗಮನಿಸಿದ್ದ ಜರ್ಮನಿಯ ಪ್ರತಿಷ್ಠಿತ ಕಂಪೆನಿಯು ಕ್ಯಾಂಪಸ್ ಇಂಟರ್ವ್ಯೂನಲ್ಲಿ ನೌಕರಿ ನೀಡಿತ್ತು.
ಎರಡು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿ ಬಳಿಕ ತಾಯ್ನಾಡಿಗೆ ವಾಪಾಸ್ ಆಗಿದ್ದರು. ನಗರದ ರಾಯಣ್ಣ ವೃತ್ತದ ಬಳಿಯ ಡಬಲ್ ರಸ್ತೆಯ ನಿವಾಸಿ ಹಾಗೂ ವಕೀಲರಾಗಿರುವ ಮಿರ್ಜಾ ಇಸ್ಮಾಯಿಲ್ ಮತ್ತು ಹಬೀಬಾ ದಂಪತಿಯ ಪುತ್ರ ಮಿರ್ಜಾ ಖಾದರ್ ಬೇಗ್.
ಸಹೋದರಿ ಡಾ. ನೂರ್ ಶಾಜಿಯಾ ಬೇಗಂ, ಸಹೋದರ ಮಿರ್ಜಾ ಅಸಗರ್ ಬೇಗ್ ಸಹ ಸಹೋದರನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ತನ್ನ ಮೂವರು ಮಕ್ಕಳಲ್ಲಿ ಒಬ್ಬರು ಐಎಎಸ್ ಪೂರೈಸಬೇಕೆಂಬ ತಂದೆ-ತಾಯಿ ಬಯಕೆಯನ್ನು ಖಾದರ್ ಬೇಗ್ ಈಡೇರಿಸಿದ್ದಾರೆ.
ದೆಹಲಿಯತ್ತ ಪ್ರಯಾಣ ಬೆಳೆಸಿ ಮಿರ್ಜಾ ಖಾದರ್ ಬೇಗ್ ಐಎಎಸ್ ತರಬೇತಿ ಪಡೆದುಕೊಂಡರು. 2017ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಆದರೆ ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಕಂಡಿರಲಿಲ್ಲ. 2018ನೇ ಸಾಲಿನಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು 336ನೇ ಸ್ಥಾನ ಪಡೆದರು. ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳುವಂತೆ ನನ್ನ ಪೋಷಕರು ಹೇಳಿದರು. ಅವರ ಸಹಕಾರದಿಂದಲೇ ಐಎಎಸ್ ಪೂರೈಸಲು ಆಯಿತು. ಪ್ರಯತ್ನ ಇದ್ದೇ ಇರುತ್ತೆ. ತುಂಬಾ ಶ್ರದ್ಧೆ, ಕಷ್ಟಪಟ್ಟು ಓದಿದ್ದರಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಯ್ತು. 336 ನೇ ಸ್ಥಾನ ಬಂದಿದ್ದರಿಂದ ತುಂಬಾ ಖುಷಿಯಾಗಿದೆ ಅಂತಾರೆ ಮಿರ್ಜಾ ಖಾದರ್ ಬೇಗ್.
ಇನ್ನು ಪುತ್ರನ ಸಾಧನೆಗೆ ಪೋಷಕರು ಖುಷಿಪಟ್ಟಿದ್ದಾರೆ. ಮನೆಯಲ್ಲಿ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದರು. ನನ್ನ ಕೈಯಲ್ಲಿ ಆಗದ ಸಾಧನೆಯನ್ನು ನನ್ನ ಪುತ್ರ ಮಾಡಿರುವುದು ತುಂಬಾನೇ ಖುಷಿ ಕೊಟ್ಟಿದೆ. 1979ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ನಾನು ತೆಗೆದುಕೊಂಡಿದ್ದೆ. ಆದ್ರೆ, ಇದು ನನ್ನಿಂದ ಸಾಧ್ಯವಾಗಿರಲಿಲ್ಲ. ನಮ್ಮ ಮನೆಯಲ್ಲಿ ಯಾರಾದರೂ ಒಬ್ಬರು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿತ್ತು. ಅದು ಈಗ ಈಡೇರಿದೆ ಅಂತಾರೆ ಮಿರ್ಜಾ ಖಾದರ್ ಬೇಗ್ ತಂದೆ ಮಿರ್ಜಾ ಇಸ್ಮಾಯಿಲ್.